ಸಫಾಯಿ ಕರ್ಮಚಾರಿಗಳಿಗೆ ಪಟ್ಟಾಗಳನ್ನು ವಿತರಿಸಲು ಒತ್ತಾಯ

ಬಳ್ಳಾರಿ, ಫೆ.17:ಪಾಲಿಕೆಯ ವಾರ್ಡ್ ನಂ 15ರ ಪಾಂಡುರಂಗ ಸ್ವಾಮಿಯ ದೇವಸ್ಥಾನದ ಹಿಂಭಾಗದಲ್ಲಿ ಟಿ.ಎಸ್ ನಂ.626/24/8 ಎ2 ರಲ್ಲಿ ಸುಮಾರು 68 ವರ್ಷಗಳಿಂದ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸುತ್ತಿರುವ ಪೌರಕಾರ್ಮಿಕರು ಹಾಗೂ ಸಫಾಯಿ ಕರ್ಮಚಾರಿಗಳ ಕುಟುಂಬದವರಿಗೆ ಪಟ್ಟಾಗಳನ್ನು ವಿತರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರ ಸಫಾಯಿ ಕರ್ಮಚಾರಿಗಳ ಆಯೋಗದ ನಾಮನಿರ್ದೇಶನ ಸದಸ್ಯರಾದ ಕುಂದುಕೂರು ರಾಮುಡು ಹಾಗೂ ಆ ಪ್ರದೇಶದ ನಾಗರೀಕರು ಒತ್ತಾಯಿಸಿದ್ದಾರೆ.

ಈ ಹಿಂದೆ ಅಂದರೆ 1949ರಿಂದ 40 ವರ್ಷಗಳ ಕಾಲ ಸಫಾಯಿ ಕರ್ಮಚಾರಿಗಳಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿರುವಂತಹ ಸಫಾಯಿ ಕರ್ಮಚಾರಿಗಳ ಅವಲಂಬಿತರು ಮತ್ತು ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿದಂತವರು ಹಾಗೂ ಪ್ರಸ್ತುತ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ವಾರ್ಡ್ ನಂ.15ರ ಟಿ.ಎಸ್.ನಂ.626/2ಎ/8ಎ2 ವ್ಯಾಪ್ತಿಯಲ್ಲಿ ಬರುವ ಶ್ರೀರಾಂಪುರ ಕಾಲೋನಿ, ಪಾಂಡುರಂಗಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು 68 ವರ್ಷಗಳಿಂದ ವಾಸಿಸುತ್ತಿದ್ದರೂ ಸಹ ಇವರುಗಳಿಗೆ ಸರ್ಕಾರ ಪಟ್ಟಾಗಳನ್ನು ನೀಡಲು ಕೆಲ ಅಧಿಕಾರಿಗಳು ಮತ್ತು ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳು ಐದು ಭಾರಿ ಸರ್ವೇ ಕಾರ್ಯಗಳನ್ನು ನಿರ್ವಹಿಸಿ ಹಾಗೂ ಆ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಗುತ್ತಿಗೆಯನ್ನು ಪಾವತಿಸಲು ಎಲ್ಲಾ ಮನೆಗಳಿಗೆ ಕರ ಪಾವತಿ ಮಾಡಲು ಅಳತೆ ಮತ್ತು ಕರ ಶುಲ್ಕವನ್ನು ತಂಬಲು ಅರ್ಜಿಗಳನ್ನೂ ಸಹ ಅಧಿಕಾರಿಗಳು ಮನೆ ಮನೆಗಳಿಗೆ ವಿತರಿಸಿದ್ದರು. ಹಾಗೂ ಇತ್ತೀಚಿನ ದಿನಗಳಲ್ಲಿ ಸ್ಲಂ ಬೋರ್ಡ್ ಅಧಿಕಾರಿಗಳು ಸಹ ಪ್ರತಿಯೊಂದು ಮನೆ ಮನೆಗೆ ಸಂಖ್ಯೆಯನ್ನು ಸಹ ನೀಡಿದ್ದರು. ಆದರೆ ಇಲ್ಲಿಯವರೆಗೆ ಪಟ್ಟಾಗಳನ್ನು ವಿತರಿಸಿಲ್ಲ ಎಂದು ಅವರು ಹೇಳಿದ್ದಾರೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕಾರ್ಮಿಕ ಸಚಿವರು ಆದ ಸಂತೋಷ್ ಲಾಡ್ ರವರಿಗೆ ಇಂದು ಬರೆದ ಮನವಿ ಪತ್ರವನ್ನು ಸಲ್ಲಿಸಿರುವ ಕುಂದುಕೂರು ರಾಮುಡು ಹಾಗೂ ಪ್ರಭಾಕರ್, ಕೆ.ನಾಗರಾಜ, ಪೆದ್ದನ್ನ ಸೇರಿದಂತೆ ಮತ್ತಿತರರು ಸದರಿ ನಿವೇಶನದ ಸ್ಥಳವನ್ನು ರಾಜ್ಯ ಸರ್ಕಾರವು ಈ ಹಿಂದೆ ನಗರಸಭೆ ಸುಪರ್ಧಿಗೆ ನೀಡಿದ್ದರು. ಸದರಿ ನಿವೇಶನದಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೆಲವರಿಗೆ ಮಾತ್ರ ಪಟ್ಟಾಗಳನ್ನು ವಿತರಿಸಿ, ಇನ್ನೂಳಿದ 350ಕ್ಕೂ ಹೆಚ್ಚು ಜನರಿಗೆ ಪಟ್ಟಾಗಳನ್ನು ವಿತರಿಸದೇ ತಾರತಮ್ಯವನ್ನು ಮಾಡಿದ್ದಾರೆಂದು ಆರೋಪಿಸಿರುವ ಅವರು, ರಾಜ್ಯದ ಮುಖ್ಯಮಂತ್ರಿಗಳು ಆ ಸ್ಥಳದಲ್ಲಿ ವಾಸಿಸುತ್ತಿರುವ ಸಫಾಯಿ ಕರ್ಮಚಾರಿಗಳು ಹಾಗೂ ಪೌರಕಾರ್ಮಿಕರುಗಳಿಗೆ ಪಟ್ಟಾ ವಿತರಣೆಯಲ್ಲಿ ಆಗಿರುವ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ ಸರಿಪಡಿಸಬೇಕೆಂದು ಅವರುಗಳು ಒತ್ತಾಯಿಸಿದ್ದಾರೆ.

Leave a Comment