ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಡೇವಿಡ್‌ ವಾರ್ನರ್‌ ನೂತನ ನಾಯಕ

ನವದೆಹಲಿ, ಫೆ 27 – ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎನಿಸಿಕೊಂಡಿರುವ ಭಾರತದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ಆವೃತ್ತಿಯಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ ತಂಡವನ್ನು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್ ಮುನ್ನಡೆಸಲಿದ್ದಾರೆ.

ಗುರುವಾರ ಸನ್‌ ರೈಸರ್ಸ್ ಹೈದರಾಬಾದ್ ಟ್ವಿಟರ್‌ನಲ್ಲಿ ಈ ಕುರಿತು ಸ್ಪಷ್ಟಪಡಿಸಿದೆ. ಜತೆಗೆ, ತಂಡದ ನೂತನ ನಾಯಕ ವಾರ್ನರ್ ಮಾತನಾಡಿರುವ ವೀಡಿಯೋವೊಂದನ್ನು ಎಸ್‌ಐಎಚ್‌ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದೆ.

ಐಪಿಎಲ್ ಮುಂಬರುವ ಆವೃತ್ತಿಯಲ್ಲಿ ತಂಡದ ನಾಯಕತ್ವ ನೀಡಿರುವುದಕ್ಕೆ ರೋಮಂಚನವಾಗಿದೆ. ಈ ಅವಕಾಶ ನೀಡಿದ್ದಕ್ಕಾಗಿ ಕೃತಜ್ಞನಾಗಿರುತ್ತೇನೆ. ಕಳೆದ ವರ್ಷ ತಂಡವನ್ನು ಮುನ್ನಡೆಸಿದ್ದ ಕೇನ್ ವಿಲಿಯಮ್ಸನ್ ಹಾಗೂ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ. ತಂಡ ಪ್ರಶಸ್ತಿ ಗೆಲ್ಲಲ್ಲು ನನ್ನ ಕೈಲಾದಷ್ಟು ಪ್ರಯತ್ನ ನಡೆಸುತ್ತೇನೆ,” ಎಂದು ಡೇವಿಡ್ ವಾರ್ನರ್ ವೀಡಿಯೋದಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

2019ರ ಆವೃತ್ತಿಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಸನ್‌ ರೈಸರ್ಸ್ ಹೈದರಾಬಾದ್ ತಂಡವನ್ನು ಕೆಲವು ಪಂದ್ಯಗಳಲ್ಲಿ ಮುನ್ನಡೆಸಿದ್ದರು. ನಂತರ, ಭುವನೇಶ್ವರ್ ಕುಮಾರ ತಂಡದ ಸಾರಥ್ಯ ವಹಿಸಿದ್ದರು.

ಚೆಂಡು ವಿರೂಪ ಪ್ರಕರಣದಿಂದ ಒಂದು ವರ್ಷ ಅಮಾನತು ಶಿಕ್ಷೆ ಅನುಭವಿಸಿ ಕ್ರಿಕೆಟ್‌ಗೆ ಮರಳಿದಾಗಿನಿಂದ ಅದ್ಭುತ ಲಯದಲ್ಲಿದ್ದಾರೆ. ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರು 57 ರನ್ ಸಿಡಿಸಿದ್ದರು. ಆಸ್ಟ್ರೇಲಿಯಾ ಪಂದ್ಯ ಗೆಲ್ಲುವ ಮೂಲಕ ಚುಟುಕು ಸರಣಿ ವಶಪಡಿಸಿಕೊಂಡಿತ್ತು.

Leave a Comment