ಸನಾತನ ಸಂಸ್ಥೆಯನ್ನು ನಿಷೇಧ ವಿರೋಧಿಸಿ ಪ್ರತಿಭಟನೆ

ಬೆಂಗಳೂರು,ಸೆ.೫-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಸಿಲುಕಿಸಿ ಹಿಂದೂ ಧರ್ಮ ರಕ್ಷಣೆಯಲ್ಲಿ ತೊಡಗಿರುವ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯನ್ನು ನಿಷೇಧ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ನಗರದ ಬನ್ನಪ್ಪ ಪಾರ್ಕ್ ನಿಂದ ಫ್ರೀಡಂ ಪಾರ್ಕ್ ವರೆಗೂ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಹಿಂದೂ ಪರ ಹೋರಾಟಗಾರರು, ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.
ಬಂಧಿತರಿಗೆ ಹಿಂಸೆ ನೀಡಿರುವ ಎಸ್‌ಐಟಿ ಪೊಲೀಸರು ತಮಗೆ ಬೇಕಾದ ಹಾಗೆ ಹೇಳಿಕೆಗಳನ್ನು ಬರೆಯಿಸಿಕೊಂಡಿದ್ದಾರೆ. ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.

ಬಂಧಿತ ೧೪ ಮಂದಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಆದರೆ ಅವರಲ್ಲಿ ಒಬ್ಬರೂ ಸನಾತನ ಅಥವಾ ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರಲ್ಲ. ಆದರೂ ಈ ಸಂಘಟನೆಗಳ ಹೆಸರು ಎಳೆದು ತರಲಾಗುತ್ತಿದ್ದು, ಇದರ ಹಿಂದೆ ನಿಷೇಧ ಮಾಡುವ ಷಡ್ಯಂತ್ರ ಇದೆ. ಹಿಂದೂಗಳೆಲ್ಲರೂ ಇದರ ವಿರುದ್ಧ ಒಗ್ಗಟ್ಟಾಗಬೇಕು ಎಂದು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಮೋಹನ್ ಗೌಡ, ಸೋ ಕಾಲ್ಡ್ ಬುದ್ಧಿಜೀವಿಗಳು ಸನಾತನ ಸಂಸ್ಥೆಯ ನಿಷೇಧಕ್ಕೆ ಅಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ.ಆದರೆ, ಸನಾತನ ಸಂಸ್ಥೆ ಅಧ್ಯಾತ್ಮ ಹಾಗೂ ಧರ್ಮ ರಕ್ಷಣೆಗಾಗಿ ಇರುವ ಸಂಸ್ಥೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕು ನಿಷೇಧ ಮಾಡಲು ಅವಕಾಶ ಕೊಡುವುದಿಲ್ಲ ಎಂದ ಅವರು, ಚಾರ್ಜ್ ಶೀಟ್ ಹಾಕದೆ, ಕೋಕಾ ಕಾಯ್ದೆ ಹಾಕಿದ್ದಾರೆ.ಇದು ಹಿಂದೂ ಹೋರಾಟಗಾರರನ್ನು ಬಂಧಿಸುವ ಸಂಚು ಎಂದು ಆರೋಪಿಸಿದರು.

ಮೈಸೂರಿನಲ್ಲಿ ೮ ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದ ಹಬೀಬ್ ಪಾಷಾ ಮೇಲೆ ಯಾಕೆ ಇವರು ಕೋಕಾ ಹಾಕಿಲ್ಲ.ಈ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಎನ್‌ಐಐ ತನಿಖೆ ಮಾಡಿ ಪಿಎಫ್‌ಐ ಕೈವಾಡ ಇದೆ ಎಂದಿತ್ತು.ಆದರೆ, ಆದರೆ ಸಂಸ್ಥೆಯನ್ನ ಇಲ್ಲಿಯವರೆಗೂ ಏಕೆ ನಿಷೇಧಿಸಿಲ್ಲ ಎಂದು ಪ್ರಶ್ನೆ ಮಾಡಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಿದರೆ ಪ್ರಜಾಪ್ರಭುತ್ವದ ವಿಜಯ ಎಂದು ವ್ಯಾಖ್ಯಾನಿಸುವ ವಿಚಾರವಾದಿಗಳು, ಎಡಪಂಥೀಯರನ್ನು ಬಂಧಿಸಿದಾಗ ಪ್ರಜಾಪ್ರಭುತ್ವದ ವೈಫಲ್ಯ ಎನ್ನುತ್ತಾರೆ. ದೇಶ ವಿರೋಧಿ ಚಟುವಟಿಕೆಗಳನ್ನು ಪ್ರೇರೇಪಿಸುವವರ ವಿರುದ್ಧ ಮಾತನಾಡಿದರೆ ಅದನ್ನು ಕೋಮುವಾದ ಎನ್ನುತ್ತಾರೆ ಎಂದು ಹೇಳಿದರು.

ಬಂಧಿತರಿಗೆ ಜೈಕಾರ….!

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತವಾಗಿರುವ ಅಮೋಲ್ ಕಾಳೆ, ಮನೋಹರ್ ಯಡವೆ, ಪರಶುರಾಮ್ ವಾಗ್ಮೋರೆ, ಕೆ.ಟಿ.ನವೀನ ಕುಮಾರ್ ಗೆ ಸಮಿತಿಯ ಸದಸ್ಯರು ಜೈಕಾರ ಹಾಕಿದರು.

Leave a Comment