‘ಸನಾತನ ಧರ್ಮೀಯರಿಗೆ ವೇದಗಳೇ ಮೂಲ’

ಮಂಗಳೂರು, ಸೆ. ೧- ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ನಾವೆಲ್ಲರೂ ಓದಲೇಬೇಕಾದ, ಅಧ್ಯಯನ ಹಾಗೂ ಅನುಸಂಧಾನ ಮಾಡಲೇಬೇಕಾದ ಉತ್ಕೃಷ್ಟ ಗ್ರಂಥಗಳು. ಸನಾತನ ಧರ್ಮೀಯರಾದ ನಮಗೆ ವೇದಗಳೇ ಮೂಲ. ವೇದಗಳನ್ನು ಅರಿತುಕೊಳ್ಳಬೇಕಾದ್ದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ. ಇದಕ್ಕಾಗಿ ಸಂಸ್ಕೃತವನ್ನು ಕಲಿಯಲೇಬೇಕಾಗುತ್ತದೆ ಎಂದು ಶ್ರೀಮಾನ್ ಪ್ರಭಾಕರ ಅಡಿಗ ಕದ್ರಿ ಅಭಿಪ್ರಾಯಪಟ್ಟರು.
ಅವರು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸಂಸ್ಕೃತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ’ಜೀವಾತ್ಮ ಪರಮಾತ್ಮರೆಂಬ ಹಕ್ಕಿಗಳೆರಡು ವಿಹರಿಸುತ್ತಿರುವ ಶರೀರವೆಂಬ ಈ ವೃಕ್ಷದಿಂದ ಸುಖವೆಂಬ ಫಲವನ್ನು ಉಣ್ಣಬೇಕಾದರೆ ಸನ್ಮಾರ್ಗದಲ್ಲಿ ನಡೆಯಬೇಕು. ಸುಸಂಸ್ಕೃತ ಜೀವನ ನಮ್ಮದಾಗಬೇಕು. ದೇವಭಾಷೆಯಾದ, ವೇದಭಾಷೆಯಾದ, ಸರ್ವಭಾಷೆಗಳ ಮೂಲವಾದ ಸಂಸ್ಕೃತವನ್ನು ಅಭ್ಯಾಸ ಮಾಡಬೇಕು. ತನ್ಮೂಲಕವಾಗಿ ವೇದಗಳಲ್ಲಿರುವ ಸತ್ಯವನ್ನು ಅರಿತುಕೊಳ್ಳಬೇಕು.’ ಎಂದು ಸಂಸ್ಕೃತ ಬಾಷೆಯ ಹಿರಿಮೆ ಮತ್ತು ಸನಾತನ ಸಂಸ್ಕೃತಿಯ ಗರಿಮೆಗಳನ್ನು ವಿದ್ಯಾರ್ಥಿಗಳಿಗೆ ವಿಷದವಾಗಿ ವಿವರಿಸಿದರು.
ಸಂಸ್ಕೃತ ಭಾರತಿಯವರು ಆಯೋಜಿಸಿದ್ದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ವಿಜಯಾನಂದ ಅವರು ಸಂಸ್ಕೃತ ಭಾರತಿಯ ಚಟುವಟಿಕೆಗಳ ಬಗ್ಗೆ ವಿವರಿಸಿ ಮಾತನಾಡುತ್ತಾ ಸಂಸ್ಕೃತವನ್ನು ಎಲ್ಲರೂ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ ಮತಗಳ ಭೇದವಿಲ್ಲದೆ ಯಾವ ವಯೋಮಾನದವರೂ ಕೂಡಾ ಸಂಸ್ಕೃತವನ್ನು ಕಲಿಯಬಹುದು, ಸಂಸ್ಕೃತವನ್ನು ಕಲಿಯುವವರಿಗಾಗಿ ಉಚಿತ ತರಗತಿಗಳನ್ನು ಸಂಸ್ಕೃತಭಾರತಿ ನಡೆಸುತ್ತಿದೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಾಂಶುಪಾಲೆ ಸುನಿತಾ ವಿ. ಮಡಿ ಮತ್ತು ಉಪಪ್ರಾಂಶುಪಾಲ ದಯಾನಂದ ಕಟೀಲು ಉಪಸ್ಥಿತರಿದ್ದರು.
ಅಧ್ಯಾಪಕ ಶ್ರೀಪತಿ ಭಟ್, ನಾಗರಾಜ್ ಭಟ್, ಸತ್ಯನಾರಾಯಣ ಭಟ್ ಮತ್ತು ರಜನಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಸಂಸ್ಕೃತ ದೇಶಭಕ್ತಿ ಸಮೂಹಗಾನ ಮತ್ತು ‘ಸತ್ಯಕಾಮ ಜಾಬಾಲ’ ಎಂಬ ಸಂಸ್ಕೃತ ನಾಟಕಗಳು ಉತ್ತಮವಾಗಿ ಮೂಡಿಬಂದವು.
ಭಾರತೀಯ ಸಂಸ್ಕೃತಿಯಂತೆ ಜಲ ಗಂಧ ಪುಷ್ಪ ಹಾಗೂ ಅಕ್ಷತೆಗಳನ್ನಿತ್ತು ಅತಿಥಿಗಳನ್ನು ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಾದ ಶ್ರೀಯ ಮಯ್ಯ ಸ್ವಾಗತಿಸಿ, ಭಗತ್ ಉಳ್ಳಾಲ ವಂದಿಸಿದರು. ವೇದವ್ಯಾಸ ಕಾರ್‍ಯಕ್ರಮ ನಿರ್ವಹಣೆಗೈದರು. ಸಂಪೂರ್ಣ ಕಾರ್ಯಕ್ರಮವನ್ನು ಸಂಸ್ಕೃತಭಾಷೆಯಲ್ಲಿ ಸಂಯೋಜಿಸಲಾಗಿತ್ತು.

Leave a Comment