ಸದಾ ಕುಳಿತು ಮಾಡುವ ಕೆಲಸ ಭಯಾನಕ ಕಾಯಿಲೆಗಳಿಗೆ ದಾರಿ

ಈಗಂತೂ ಕುಳಿತುಕೊಂಡೆ ಕೆಲಸ ಮಾಡುವ ಉದ್ಯೋಗಗಳೇ ಹೆಚ್ಚು ಸಾಫ್ಟ್‌ವೇರ್ ಇಂಜಿನಿಯರಿಂಗ್, ಬಿಪಿಓ, ಕಟ್ಟಡದ ವಿನ್ಯಾಸಗಳನ್ನು ಸಿದ್ದಪಡಿಸಬೇಕಾದರೆ ಗಂಟೆಗಟ್ಟಲೇ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳಲೇಬೇಕು.

ಅದರಲ್ಲೂ ಕಾರು, ಬಸ್‌ಗಳು ಮತ್ತು ರೈಲಿನಲ್ಲಿ ಪ್ರಯಾಣಿಸುವಾಗ ಕುಳಿತುಕೊಳ್ಳುವುದು ಅನಿವಾರ್ಯವೂ ಹೌದು. ದಿನವಿಡೀ ನಮ್ಮ ದೇಹ ಕುಳಿತುಕೊಂಡು ಕಾಲ ಕಳೆಯುವುಕ್ಕೆ ವಿನ್ಯಾಸಗೊಂಡಿಲ್ಲ. ಸದಾ ಚಟುವಟಿಕೆಯಲ್ಲೇ ಇರಬೇಕಾಗುತ್ತದೆ. ಅಲ್ಲದೆ ಯಾವಾಗಲೂ ಕುಳಿತೇ ಇದ್ದರೆ ಪ್ರಕೃತಿ ನಿಯಮಕ್ಕೂ ವಿರುದ್ಧವೆಂದು ಅಮೆರಿಕ ಕ್ಯಾನ್ಸರ್ ಸೊಸೈಟಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಈ ವರದಿಯ ಪ್ರಕಾರ ಒಂದು ದಿನದಲ್ಲಿ ಆರು ಗಂಟೆಗೂ ಹೆಚ್ಚಿನ ಕಾಲ ಕುಳಿತುಕೊಂಡಿರುವ ವ್ಯಕ್ತಿಗಳು ದಿನಕ್ಕೆ ಮೂರು ಅಥವಾ ಕಡಿಮೆ ಗಂಟೆಗಳ ಕಾಲ ಕುಳಿತುಕೊಳ್ಳುವ ವ್ಯಕ್ತಿಗಿಂತಲೂ ಬಹಳ ಬೇಗ ಸಾವನ್ನಪ್ಪುವ ಸಾಧ್ಯತೆ. ಶೇಕಡ ೧೯ ರಷ್ಟು ಹೆಚ್ಚಿದೆ ಎಂಬ ಅಂಶ ಕಂಡು ಬಂದಿದೆ.

neck-pain

ಅಮೆರಿಕ ಸೊಸೈಟಿ ನಡೆಸಿದ ಸಂಶೋಧನೆಯಂತೆ  ೧,೨೮,೦೦೦ ಆರೋಗ್ಯವಂತರಾಗಿರುವ ಪುರುಷ ಮತ್ತು ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ೨೧ ವರ್ಷದ ಬಳಿಕ ೪೯,೦೦೦ ಜನರು ಮೃತಪಟ್ಟಿದ್ದರು.

ದಿನದಲ್ಲಿ ಹೆಚ್ಚಿನ ಸಮಯ ಕುಳಿತುಕೊಂಡೇ ಇರುವುದರಿಂದ ಅಪಾಯಗಳು ಹೆಚ್ಚಾಗಿರುವುದು ಗೋಚರಿಸಿದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಮೂತ್ರಪಿಂಡ, ಶ್ವಾಸಕೋಶ ಕಾಯಿಲೆ, ನರದೌರ್ಬಲ್ಯ ಸ್ನಾಯು ಮತ್ತು ಮೂಳೆಗಳ ಆರೋಗ್ಯ ಕುಂಠಿತವಾಗುತ್ತವೆ.. ಸ್ಥೂಲಕಾಯ, ಅಧಿಕ ರಕ್ತದ ಒತ್ತಡವೂ ಹೆಚ್ಚಾಗುವ ಅಪಾಯವಿದೆ.

ಸದಾ ಕುಳಿತುಕೊಂಡೇ ಇದ್ದರೆ ಕಡಿಮೆ ಶಕ್ತಿ ಬಳಕೆಯಾಗಿ ದೇಹ ಸ್ಥೂಲಕಾಯವಾಗಿ ಕೊಬ್ಬು ಸಂಗ್ರಹವಾಗುತ್ತದೆ. ಹಾರ್ಮೋನ್‌ಗಳು ಮತ್ತು ಕಿಣ್ವಗಳು ಬಿಡುಗಡೆಯಾಗಿ ಕಾಲ್ಸಿಯಂ ಶೇಖರಣೆಯಾಗುತ್ತದೆ.

ಕುಳಿತುಕೊಳ್ಳುವುದು ಅನಿವಾರ್ಯವಾಗುವ ಸಂದರ್ಭಗಳಲ್ಲಿ ೧೦ ನಿಮಿಷವಾದರೂ ದೇಹ ಭಾಗಿಸುವುದನ್ನು ಪ್ರತಿದಿನ ಕೆಲವು ಬಾರಿಯಾದರೂ ಮಾಡುವುದರಿಂದ ಕಾಯಿಲೆಗಳು ಬರದಂತೆ ತಡೆಗಟ್ಟಬಹುದು.

ಮಧ್ಯಾಹ್ನ ಊಟವಾದ ನಂತರ ಹೆಚ್ಚಿನ ಜನರು ನಿದ್ರೆಗೆ ಜಾರಿ ಬಿಡುತ್ತಾರೆ. ಬದಲಿಗೆ ಕೊಂಚ ನಡೆದಾಡಬೇಕು. ಕಚೇರಿಯಲ್ಲಿದ್ದರೆ ಮೆಟ್ಟಿಲು ಹತ್ತಿ ಇಳಿಯುವುದು ಒಳ್ಳೆಯದು. ಹೀಗೆ ಮಾಡುವುದರಿಂದ ದೇಹದಲ್ಲಿರುವ ಕ್ಯಾಲೋರಿಗಳನ್ನು ಕರಗಿಸಬಹುದು. ಈ ರೀತಿ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

Leave a Comment