ಸದಾಶಿವ ವರದಿ : ಚುನಾವಣೆಯಲ್ಲಿ ಸೋಲಿಸಲು ತೀರ್ಮಾನ

ರಾಯಚೂರು.ಏ.15- ಕಳೆದ 20 ವರ್ಷಗಳಲ್ಲಿ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದ್ದು ಹಾಗೂ ನ್ಯಾ. ಎಜೆ ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡುವಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷವೂ ವಿಫಲವಾಗಿದ್ದು, ಚುನಾವಣೆಯಲ್ಲಿ ವಿರೋಧಿಗಳನ್ನು ಸೋಲಿಸಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಹನುಮಂತ ಮನ್ನಾಪೂರು ತಿಳಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಮಾ.31 ರಂದು ರಾಯಚೂರು, ಯಾದಗಿರಿ ಜಿಲ್ಲೆಯ ಸೈದಾಪೂರಿನಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಮಾದಿಗ ಹಿರಿಯ ಸಂಘಟಕರ ಸಭೆಯಲ್ಲಿ ನ್ಯಾ.ಎಜೆ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವಲ್ಲಿ ವಿರೋಧಿಸುವುದನ್ನು ಚುನಾವಣೆಯಲ್ಲಿ ಸೋಲಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತೆಂದು ತಿಳಿಸಿದರು.
ಸುಮಾರು 15 ಲೋಕಸಭಾ ಕ್ಷೇತ್ರಗಳಲ್ಲಿ 3 ರಿಂದ 4 ಲಕ್ಷ ಮತಗಳನ್ನು ಹೊಂದಿರುವ ಮಾದಿಗ ಸಮುದಾಯದ ನಿರ್ಣಾಯಕ ಸ್ಥಾನದಲ್ಲಿದ್ದು, ಮೂರು ಪಕ್ಷಗಳ ಪ್ರಮುಖರಿಗೆ ಚುನಾವಣೆಯಲ್ಲಿ ಪಾಠ ಕಲಿಸಲು ಸಮುದಾಯದವರು ಒಂದು ಅವಕಾಶವಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳಬೇಕು. ಮೂರು ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡಬಾರದೆಂದು ತಿಳಿಸಿದರು. ಆಯೋಗ ವರದಿಯನ್ನು ಕೇಂದ್ರಕ್ಕೆ ಕಳುಹಿಸದಂತೆ ಮೂರು ಪಕ್ಷಗಳಿಂದ ಷಡ್ಯಂತ್ರ ರೂಪಿಸಲಾಗುತ್ತಿದೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್, ತುಮಕೂರಿನಲ್ಲಿ ಜೆಡಿಎಸ್, ಕನಕಪುರ ಕಾಂಗ್ರೆಸ್, ಬಳ್ಳಾರಿ ಕಾಂಗ್ರೆಸ್, ರಾಯಚೂರು ಕಾಂಗ್ರೆಸ್, ಹುಬ್ಬಳ್ಳಿ ಬಿಜೆಪಿ, ಬೀದರ ಕಾಂಗ್ರೆಸ್, ಗುಲ್ಬರ್ಗಾ ಕಾಂಗ್ರೆಸ್, ಚಾಮರಾಜನಗರ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಬೇಕೆಂದು ಸಮಿತಿಯೂ ತೀರ್ಮಾನ ಕೈಗೊಂಡಿದೆಂದರು.
ರಾಜ್ಯ ಗೌರವಾಧ್ಯಕ್ಷ ಎಸ್. ಮಾರೆಪ್ಪ ವಕೀಲರು ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಶಾಸಕರು, ಸಚಿವರು ಮತ ಕೇಳಲು ಕಾರ್ಮಿಕರ ಬಳಿ ಬರುತ್ತಾರೆ. ಆದರೆ, ಆರ್‌ಟಿಪಿಎಸ್, ವೈಟಿಪಿಎಸ್ ಹಾಗೂ ನಗರಸಭೆ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ನಗರಸಭೆ ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಪಡಿಸಿ, ಅನೇಕ ದಿನಗಳು ಗತಿಸಿದರೂ, ಇದುವರೆಗೂ ನಾಲ್ಕು ತಿಂಗಳ ವೇತನ ಪಾವತಿಸಿರುವುದಿಲ್ಲ.
ನೀರಿನ ವಿಭಾಗದ ಕಾರ್ಮಿಕರಿಗೆ ಹತ್ತು ತಿಂಗಳ ವೇತನ, ಎಲೆಕ್ಟ್ರಿಕಲ್ ವಿಭಾಗದ ಮೂರು ತಿಂಗಳ ವೇತನ, ದೇವದುರ್ಗ ಪುರಸಭೆಯ 18 ತಿಂಗಳ ವೇತನ ಪಾವತಿಸಿರುವುದಿಲ್ಲ. ಜಿಲ್ಲಾಧಿಕಾರಿ ಹೊರಡಿಸಿದ ನಡಾವಳಿಗಳು ಕಾಗದದಲ್ಲಿ ಉಳಿದಿದ್ದು, ಚುನಾವಣೆಯಲ್ಲಿ ಮೂರು ಪಕ್ಷಗಳಿಗೆ ಮತ ಚಲಾಯಿಸದಂತೆ ತೀರ್ಮಾನಿಸಲಾಗಿದೆಂದರು.
ಈ ಸಂದರ್ಭದಲ್ಲಿ ನರಸಪ್ಪ ದಂಡೋರಾ, ಆಂಜಿನೇಯ್ಯ ಉಟ್ಕೂರು, ಅಬ್ರಾಹಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment