ಸದನದ ಕಾರ್ಯಕಲಾಪಗಳಿಗೆ ಅಡ್ಡಿ -ಸಿಎಂ ತೀವ್ರ ಆಕ್ಷೇಪ

 

ಬೆಂಗಳೂರು, ಫೆ. ೧೮- ಕಾಂಗ್ರೆಸ್ ಸದಸ್ಯರು ದುರುದ್ದೇಶಪೂರ್ವಕವಾಗಿ ಸದನದ ಕಾರ್ಯಕಲಾಪಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆಯಡಿ ಮಾಡಿದ ಪ್ರಸ್ತಾವಕ್ಕೆ ನಿಯಮ 69 ರಡಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಸಭಾಧ್ಯಕ್ಷರು ರೂಲಿಂಗ್ ನೀಡಿದ್ದರೂ ಇಂದೇ ಚರ್ಚೆಯಾಗಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿಯುವುದು ಸರಿಯಲ್ಲ ಎಂದು ಏರಿದ ದನಿಯಲ್ಲಿ ಆಕ್ಷೇಪಿಸಿದರು.
ಸಭಾಧ್ಯಕ್ಷರು ನಿಯಮಾವಳಿಗಳ ಪ್ರಕಾರ ಕಲಾಪ ನಡೆಸುತ್ತದ್ದಾರೆ. ಇಂದು ಬೆಳಿಗ್ಗೆಯಿಂದ ಸಿದ್ದರಾಮಯ್ಯನವರು ಪ್ರಸ್ತಾಪಿಸಿದ ಎಲ್ಲ ವಿಷಯಗಳನ್ನು ಆಲಿಸಿದ್ದಾರೆ. ಈ ವಿಚಾರಗಳು ನಿಲುವಳಿ ಸೂಚನೆಯಡಿ ಬರುವುದಿಲ್ಲ ಎಂಬುದು ಸಭಾಧ್ಯಕ್ಷರಿಗೆ ಮನವರಿಕೆಯಾದ ನಂತರ ನಿಯಮ-69ರಡಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರೂ ಈ ರೀತಿ ಪಟ್ಟು ಹಿಡಿಯುವುದು ಸದನಕ್ಕೆ ಶೋಭೆ ತರುವುದಿಲ್ಲ ಎಂದರು.
ಇಂದೇ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯನವರು ಪಟ್ಟು ಹಿಡಿದಾಗ ನೀವು ಸಭಾಧ್ಯಕ್ಷರಿಗೆ ನಿರ್ದೇಶನ (ಯು ಕಾಂಟ್ ಡಿಕ್ಟೇಟ್) ನೀಡಲಿಕ್ಕೆ ಬರುವುದಿಲ್ಲ ಎಂದು ಗರಂ ಆಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ನಮ್ಮ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೇವೆ. ನಾನು ಸಭಾಧ್ಯಕ್ಷರಿಗೆ ವಿನಮ್ರವಾಗಿ ಮನವಿ ಮಾಡಿಕೊಂಡಿದ್ದೇನೆ. ಅವರಿಗೆ ನಿರ್ದೇಶನ ನೀಡಲು ಬಯಸುವುದಿಲ್ಲ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸಿದ್ದರಾಮಯ್ಯನವರು ಪ್ರಸ್ತಾಪಿಸಿದ ವಿಚಾರಗಳು ನಿಲುವಳಿ ಸೂಚನೆ ವ್ಯಾಪ್ತಿಗೆ ಬರುವುದಿಲ್ಲ. ನೀವು ಅದನ್ನು ಸಾರಾಸಗಟಾಗಿ ತಳ್ಳಿ ಹಾಕಬಹುದು ಎಂದು ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರಿಗೆ ಸಲಹೆ ಮಾಡಿದರು.
ಆ ನಂತರ ಸಭಾಧ್ಯಕ್ಷರು ಎರಡೂ ಕಡೆಯ ವಾದವನ್ನು ಆಲಿಸಿದ್ದೇನೆ. ಸಿದ್ದರಾಮಯ್ಯನವರು ಪ್ರಸ್ತಾಪಿಸಿದ ವಿಚಾರ ತೀರಾ ಹಳೆಯದಾಗಿದ್ದು, ನಿಲುವಳಿ ಸೂಚನೆಯಡಿ ಬರುವುದಿಲ್ಲ. ಇದನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಹೇಳಿದ್ದು ಕಾಂಗ್ರೆಸ್ ಸದಸ್ಯರಿಗೆ ಸಮಾಧಾನ ತರಲಿಲ್ಲ.

Leave a Comment