ಸದನದ ಒಳಗೆ ಖಾಸಗಿ ಟಿವಿ ಕ್ಯಾಮೆರಾಕ್ಕೆ ನಿಷೇಧ: ಆಕ್ರೋಶ

 

ಬೆಂಗಳೂರು, ಅ. 09: ಅಧಿವೇಶನದ ಸಮಯದಲ್ಲಿ ಖಾಸಗಿ ಟಿವಿಗಳ ಕ್ಯಾಮೆರಾಗಳನ್ನು ತರಲು ಸರ್ಕಾರ ನಿಷೇಧ ಹೇರಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಅಕ್ಟೋಬರ್ 10 ರಿಂದ ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಮೂರೂ ದಿನಗಳ ಕಾಲ ಅಧಿವೇಶನದ ವರದಿ ಮಾಡಲು ಖಾಸಗಿ ಟಿವಿಗಳಿಗೆ ನಿರ್ಬಂಧ ಹೇರಲಾಗಿದೆ. ಸರ್ಕಾರಿ ವಾಹಿನಿಯಾದ ಚಂದನ ಟಿವಿಯ ಕ್ಯಾಮೆರಾಕ್ಕೆ ಮಾತ್ರವೇ ಅಧಿವೇಶನದ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ.
ಖಾಸಗಿ ಟಿವಿಗಳ ವರದಿಗಾರರು ಅಧಿವೇಶನಕ್ಕೆ ತೆರಳಬಹುದಾಗಿದೆಯಾದರೂ ಅಧಿವೇಶನವನ್ನು ಚಿತ್ರೀಕರಿಸುವುದಕ್ಕೆ ನಿಷೇಧ ಹೇರಲಾಗಿದೆ. ಸದನದ ಹೊರಗೆ ಮಾತ್ರವೇ ಕ್ಯಾಮೆರಾಕ್ಕೆ ಅವಕಾಶ ನೀಡಲಾಗಿದೆ.ಪತ್ರಿಕೆಗಳ ಕ್ಯಾಮೆರಾಕ್ಕೆ ಅವಕಾಶ
ಪತ್ರಿಕೆಗಳಿಗೆ ಯಾವುದೇ ನಿಷೇಧ ಇಲ್ಲ, ಅವರು ಸದನದ ಒಳಗೆ ಚಿತ್ರಗಳನ್ನು ತೆಗೆಯಬಹುದಾಗಿದೆ ಆದರೆ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ನಿರಾಕರಿಸಲಾಗಿದೆ. ಚಂದನ ಟಿವಿಯಲ್ಲಿ ಅಧಿವೇಶನ ಲೈವ್ ಪ್ರಸಾರ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರೂ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಾಧ್ಯಮಗಳ ಹಕ್ಕನ್ನು ಕಸಿಯುವ ಪ್ರಯತ್ನವನ್ನು ಯಡಿಯೂರಪ್ಪ ಸರ್ಕಾರ ಮಾಡುತ್ತಿದೆ, ತನ್ನ ವೈಫಲ್ಯಗಳು ಜನರಿಗೆ ತಲುಪ ಬಾರದೆಂದು ಹೀಗೆ ಮಾಧ್ಯಮಗಳಿಗೆ ನಿಷೇಧ ಹೇರಿದ್ದಾರೆ ಎಂದು ಹೇಳಿದ್ದಾರೆ.
ಅಕ್ಟೋಬರ್ 10 ರಿಂದ ಅಧಿವೇಶನ ನಡೆಯಲಿದ್ದು, ಕೇವಲ ಮೂರು ದಿನಕ್ಕೆ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ. ಅಲ್ಲದೆ ಬೆಳಗಾವಿಯಲ್ಲಿ ನಡೆಯಬೇಕಿದ್ದ ಅಧಿವೇಶನವನ್ನು ಬೆಂಗಳೂರಲ್ಲಿ ನಡೆಸುವ ನಿರ್ಧಾರ ಮಾಡಲಾಗಿದೆ.
ನೆರೆ ಪರಿಹಾರ, ಆಪರೇಷನ್ ಕಮಲ, ಬೆಳಗಾವಿಯಿಂದ ಅಧಿವೇಶನವನ್ನು ಬದಲಾಯಿಸಿದ್ದು, ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು, ಟಿಪ್ಪು ಜಯಂತಿ ರದ್ದು, ಕೇಂದ್ರದಿಂದ ಬಂದ ಕಡಿಮೆ ನೆರೆ ಪರಿಹಾರ ಇನ್ನೂ ಹಲವು ವಿಚಾರಗಳು ಚರ್ಚೆಗೆ ಬರಲಿದ್ದು, ವಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಿವೆ. ಸರ್ಕಾರ ಮುಜುಗರ ಅನುಭವಿಸುವುದು ಜನರಿಗೆ ತಲುಪಬಾರದೆಂದು ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎನ್ನಲಾಗುತ್ತಿದೆ.

 

Leave a Comment