ಸದನಕ್ಕೆ 18 ಶಾಸಕರ ಗೈರು

ಬೆಂಗಳೂರು, ಜು. ೧೮- ಮುಖ್ಯಮಂತ್ರಿ ಕುಮಾರಸ್ವಾಮಿ ರವರು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ 15 ಅತೃಪ್ತ ಶಾಸಕರೂ ಸೇರಿದಂತೆ ಕಾಂಗ್ರೆಸ್‌ನ ಇಬ್ಬರು, ಬಿಎಸ್‌ಪಿಯ ಒಬ್ಬರು ಸದಸ್ಯರು ಗೈರುಹಾಜರಾಗಿದ್ದರು.
ಇಂದು ಬೆಳಿಗ್ಗೆ ಸದನ ಆರಂಭವಾದಾಗ ಬಿಜೆಪಿಯ ಎಲ್ಲ 105 ಶಾಸಕರು ಸದನದಲ್ಲಿ ಹಾಜರಾಗಿದ್ದರೆ, ದೋಸ್ತಿ ಪಕ್ಷಗಳ 15 ಶಾಸಕರು ಸದನದಲ್ಲಿ ಗೈರು ಹಾಜರಾಗಿದ್ದರು. ಅವರ ಜತೆಗೆ ಕಾಂಗ್ರೆಸ್ ಶಾಸಕರಾದ ಶ್ರೀಮಂತ ಪಾಟೀಲ್ ಮತ್ತು ನಾಗೇಂದ್ರ ಸದನಕ್ಕೆ ಗೈರು ಹಾಜರಾಗಿದ್ದು ವಿಶೇಷವಾಗಿತ್ತು.
ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್‌ಪಿಯ ಏಕೈಕ ಸದಸ್ಯರಾದ ಎನ್. ಮಹೇಶ್ ಸಹ ಸದನಕ್ಕೆ ಬಂದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ವಾಪಸ್ ಪಡೆದಿರುವ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಸದನದಲ್ಲಿ ಹಾಜರಿದ್ದರು.
ಪಕ್ಷೇತರ ಶಾಸಕರಾದ ಹೆಚ್. ನಾಗೇಶ್ ಮತ್ತು ಆರ್. ಶಂಕರ್ ಇನ್ನು ಸದನಕ್ಕೆ ಬಂದಿರಲಿಲ್ಲ, ಮಧ್ಯಾಹ್ನದ ನಂತರಕ್ಕೆ ಸದನಕ್ಕೆ ಹಾಜರಾಗುವ ಸಾಧ್ಯತೆಗಳಿವೆ.
ವಿಧಾನಸಭೆಯ ಆರಂಭದಲ್ಲಿ ಇಂದು ಸದನದಲ್ಲಿ ಹಾಜರಿರುವ ಸದಸ್ಯರುಗಳ ಮಾಹಿತಿ ಈ ರೀತಿ ಇದೆ.
ಬಿಜೆಪಿ-105, ಕಾಂಗ್ರೆಸ್ -67, (ಸಭಾಧ್ಯಕ್ಷರು) + 1, ಜೆಡಿಎಸ್ -34, ಪಕ್ಷೇತರರು-2,
ಸದನದಲ್ಲಿ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದ ಶ್ರೀಮಂತ ಪಾಟೀಲ ಮತ್ತು ಬಿ. ನಾಗೇಂದ್ರ ಗೈರುಹಾಜರಾಗಿರುವುದು ಕುತೂಹಲ ಮೂಡಿಸಿದೆ.
ಶಾಸಕ ಬಿ. ನಾಗೇಂದ್ರ ಅನಾರೋಗ್ಯದ ಕಾರಣ ಸದನಕ್ಕೆ ಬಂದಿಲ್ಲ ಅವರು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಶ್ರೀಮಂತ ಪಾಟೀಲ ಅವರ ಗೈರುಹಾಜರಿ ಬಗ್ಗೆ ಯಾವುದೇ ಮಾಹಿತಿಗಳಿಲ್ಲ,
ಬಿಎಸ್‌ಪಿಯ ಮಹೇಶ್ ಅವರು ನಿನ್ನೆಯೇ ತಾವು ಸದನಕ್ಕೆ ಗೈರು ಹಾಜರಾಗುವುದಾಗಿ ಹೇಳಿದ್ದರು. ಕಾಂಗ್ರೆಸ್ ನಾಯಕರಾಗಲಿ, ಜೆಡಿಎಸ್ ನಾಯಕರಾಗಲಿ ತಮ್ಮನ್ನು ಸಂಪರ್ಕಿಸಿಲ್ಲ, ಸದನಕ್ಕೆ ಬನ್ನಿ ಎಂದು ಹೇಳಿಲ್ಲ, ಹಾಗಾಗಿ, ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ಶಾಸಕ ಮಹೇಶ್ ಹೇಳಿದ್ದಾರೆ.
ಸದನಕ್ಕೆ ಗೈರಾದ ಶಾಸಕರು
ಗೋಪಾಲಯ್ಯ (ಮಹಾಲಕ್ಷ್ಮಿಲೇಔಟ್), ನಾರಾಯಣಗೌಡ (ಕೆಆರ್ ಪೇಟೆ), ಭೈರತಿ ಬಸವರಾಜು (ಕೆಆರ್ ಪುರ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಆನಂದ ಸಿಂಗ್ (ವಿಜಯನಗರ), ರೋಷನ್ ಬೇಗ್ (ಶಿವಾಜಿ ನಗರ), ಆರ್. ಶಂಕರ್ (ರಾಣಿ ಬೆನ್ನೂರು), ಮುನಿರತ್ನ (ಆರ್‌ಆರ್ ನಗರ), ಹೆಚ್.ವಿಶ್ವನಾಥ್ (ಹುಣಸೂರು), ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ ಕಮಟಹಳ್ಳಿ (ಅಥಣಿ), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಪ್ರತಾಪಗೌಡ ಪಾಟೀಲ್ (ಮಸ್ಕಿ), ಡಾ.ಸುಧಾಕರ್ (ಚಿಕ್ಕಬಳ್ಳಾಪುರ), ಬಿ.ಸಿ. ಪಾಟೀಲ್ (ಹಿರೇಕೆರೂರು). ಶಾಸಕ ಶ್ರೀಮಂತ ಪಾಟೀಲ, ನಾಗೇಂದ್ರ (ಬಳ್ಳಾರಿ), ಎನ್. ಮಹೇಶ್ (ಬಿಎಸ್‌ಪಿ ಕೊಳ್ಳೆಗಾಲ) ಇಂದು ಸದನಕ್ಕೆ ಗೈರಾಗಿದ್ದರು.

Leave a Comment