ಸತ್ಯ ಹೇಳಲಾಗದಂತಹ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ ; ಸಿದ್ದು

ಮೈಸೂರು. ಜೂ.13: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದು, ವಿಪಕ್ಷಗಳ ಪಾಲಿಗೆ ನುಂಗಲಾರದ ತುತ್ತಾಗಿದೆ. ಮೋದಿ ಸರ್ಕಾರ ಭಯವನ್ನು ಸೃಷ್ಟಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದರು. ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ. ‘ಸತ್ಯ ಹೇಳಲಾಗದ ಸ್ಥಿತಿಯಲ್ಲಿ ನಾವಿದ್ದೇವೆ,’ ಎನ್ನುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, “ಮೋದಿ, ಅಮಿತ್ ಷಾ ವಿಚಾರದಲ್ಲಿ ಸತ್ಯ ಹೇಳುವಂತಿಲ್ಲ. ಪುಲ್ವಾಮಾ ಘಟನೆ ಬಗ್ಗೆ ಪ್ರಶ್ನಿಸುವಂತಿಲ್ಲ. ನಾವು ಸತ್ಯ ಹೇಳಲಾಗದಂತಹ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ನೇರ ವಾಗ್ದಾಳಿ ನಡೆಸಿದ ಅವರು, “ನರೇಂದ್ರ ಮೋದಿ ಒಬ್ಬನೇ ದೇಶಭಕ್ತ ಎನ್ನಲಾಯಿತು. ಮೋದಿಯಿಂದಲೇ ದೇಶ ಎಂದು ಬಿಂಬಿಸಲಾಯಿತು. ಮಾಧ್ಯಮಗಳು ಸೇರಿದಂತೆ ಎಲ್ಲರೂ ಮೋದಿ ಮೋದಿ ಎಂದರು. ಆದರೆ ಈಗ ನೋಡಿ ದೇಶದ ಜಿಡಿಪಿ ಕುಸಿದು ಹೋಗಿದೆ. ಇದನ್ನು ಕೂಡ ನಾವು ಪ್ರಶ್ನೆ ಮಾಡಬಾರದಾ? ಸಂವಿಧಾನದಲ್ಲಿ ನಮಗೆ ಪ್ರಶ್ನೆ ಮಾಡುವ ಹಕ್ಕಿಲ್ಲವೇ,” ಎಂದು ಪ್ರಶ್ನಿಸಿದರು.
“ಮೋದಿ ಭಾವನಾತ್ಮಕ ವಿಷಯಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸಿದ್ದಾರೆ. ಇದರಿಂದ ರೈತರು, ಯುವಕರು, ನಿರುದ್ಯೋಗಿಗಳು ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಅಧೋಗತಿಗೆ ಹೋಗಿದೆ” ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಐಎಂಎ ಹಗರಣದ ವಿಚಾರ ಸಂಬಂಧ ರೋಷನ್​ಬೇಗ್​ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. “ಅದನ್ನು ಮಾಧ್ಯಮಗಳ ಮುಂದೆ ಯಾಕೆ ಹೇಳ್ತಿಯಾ? ಹೋಗಿ ಎಸ್‌ಐಟಿ ಮುಂದೆ ಇದನ್ನೇ ಹೇಳಪ್ಪ,” ಎಂದು ಬೇಗ್​ಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು. ಐಎಂಎ ವಿಚಾರದಲ್ಲಿ ಎಸ್ಐಟಿ ರಚನೆ ಆಗಿದೆ. ಎಸ್ಐಟಿ ಸಂಪೂರ್ಣವಾಗಿ ತನಿಖೆ ನಡೆಸಲಿದೆ. ಆ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡಲ್ಲ‌” ಎಂದರು.

Leave a Comment