ಸತ್ಯನಾರಾಯಣ್, ರೂಪಾ ಎತ್ತಂಗಡಿ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೭ – ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮಗಳ ಬಗ್ಗೆ ಡಿಜಿಪಿ ಸತ್ಯನಾರಾಯಣ ರಾವ್ ಹಾಗೂ ಡಿಐಜಿ ರೂಪಾ ಅವರ ನಡುವಿನ ಜಟಾಪಟಿಗೆ ಅಂತ್ಯವಾಡಿರುವ ರಾಜ್ಯ ಸರ್ಕಾರ ಈ ಇಬ್ಬರೂ ಅಧಿಕಾರಿಗಳನ್ನು ಕಾರಾಗೃಹ ಇಲಾಖೆಯಿಂದ ಎತ್ತಂಗಡಿ ಮಾಡಿದೆ.

ಕಾರಾಗೃಹ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಸತ್ಯನಾರಾಯಣ ರಾವ್ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿದ್ದ ಮೇಘರಿಕ್ ಅವರನ್ನು ನಿಯೋಜಿಸಿದೆ.

ಕಾರಾಗೃಹದ ಡಿಜಿಪಿ ಹುದ್ದೆಯನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ (ಎಡಿಜಿಪಿ) ಸ್ಥಾನಕ್ಕೆ ಕೆಳ ದರ್ಜೆಗಿಳಿಸಲಾಗಿದ್ದು, ಮೇಘರಿಕ್ ಅವರು ಆ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆಗೊಂಡಿರುವ ಸತ್ಯನಾರಾಯಣ ರಾವ್ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.

ಕಾರಾಗೃಹದ ಉಪ ಪೊಲೀಸ್ ಮಹಾ ನಿರೀಕ್ಷಕಿ (ಡಿಐಜಿ)ಯಾಗಿದ್ದ ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ರಸ್ತೆ ಸುರಕ್ಷತಾ ವಿಭಾಗದಲ್ಲಿದ್ದ ಎಡಿಜಿಪಿ ಎಎಸ್‌ಎನ್ ಮೂರ್ತಿಯವರನ್ನು ಅರಣ್ಯ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ.

ಕಾರಾಗೃಹ ಇಲಾಖೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹಾಗೂ ತೆಲಗಿಗೆ ವಿಶೇಷ ಆತಿಥ್ಯ ನೀಡಲಾಗಿದ್ದು, ಅದಕ್ಕಾಗಿ 2 ಕೋಟಿ ರೂ. ಲಂಚ ಪಡೆಯಲಾಗಿದೆ ಎನ್ನುವ ವರದಿಯನ್ನು ಡಿಐಜಿ ರೂಪಾ ನೀಡಿದ್ದರು. ಇದಲ್ಲದೆ, ಕಾರಾಗೃಹದಲ್ಲಿ ಗಾಂಜಾ, ಡ್ರಗ್ಸ್ ಮಾಫಿಯಾ, ಇನ್ನಿತರ ಅಕ್ರಮಗಳು ನಡೆಯುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದು, ಅದನ್ನು ಮಾಧ್ಯಮಗಳಿಗೂ ನೀಡಿದ್ದರಿಂದ ಮುಜುಗರಕ್ಕೆ ಒಳಗಾಗಿ ಸರ್ಕಾರ ದಿಢೀರ್‌ ಈ ವರ್ಗಾವಣೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಕಾರಾಗೃಹಗಳ ಡಿಜಿಪಿ ಸತ್ಯನಾರಾಯಣ ರಾವ್ ಹಾಗೂ ರೂಪಾ ನಡುವೆ ಜಟಾಪಟಿ ನಡೆದು ರಾಷ್ಟ್ರ ಮಟ್ಟದ ಸುದ್ದಿಯಾಗಿತ್ತಲ್ಲದೆ, ಜೈಲಿನಲ್ಲಿ ನಡೆಯುತ್ತಿರುವ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದವು.

ಇವುಗಳ ಬಗ್ಗೆ ತನಿಖೆಗೆ ವಿನಯ್ ಕುಮಾರ್ ಅವರನ್ನು ನೇಮಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಜಟಾಪಟಿ ನಡೆಸಿದ ಇಬ್ಬರು ಅಧಿಕಾರಿಗಳನ್ನು ಎತ್ತಂಗಡಿ ಮಾಡಿದೆ. ಈ ನಡುವೆ ಜೈಲು ಅಕ್ರಮಗಳ ತನಿಖೆಗೆ ನಿಯೋಜನೆಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರು ತನಿಖೆ ಆರಂಭಿಸಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Comment