ಸತ್ಯಕ್ಕೆ ಗೆಲುವು ಸುಪ್ರೀಂನಿಂದ ನ್ಯಾಯ

ಮೈಸೂರು, ಸೆ. ೨೨- ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ, ಕ್ರಿಯಾಶೀಲತೆ ಪತನದಿಂದ ತೆಗೆದುಕೊಂಡ ನಿರ್ಧಾರ 17 ಶಾಸಕರನ್ನು ಕತ್ತಲೆಗೆ ದೂಡಿದೆಯಾದರೂ ಸತ್ಯ ಪ್ರಕಾಶಿಸಲಿದೆ ಎಂದು ಹೇಳಿರುವ ಅನರ್ಹ ಶಾಸಕ ಎಚ್. ವಿಶ್ವನಾಥ್ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಇಂದು ಬೆಳಿಗ್ಗೆ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದ್ದರಿಂದ ಈ ಸಂಕಷ್ಟಕ್ಕೆ ನಾವು ಸಿಲುಕಬೇಕಾಗಿತ್ತು.

ನಾವು ಯಾರೂ ದುಡ್ಡಿಗಾಗಿ ರಾಜೀನಾಮೆ ನೀಡಿಲ್ಲ. ಥರ್ಡ್ ಗ್ರೇಡ್ ಜನರು ನಾನು ಮಾರಾಟವಾದೆ ಎಂದು ಆರೋಪ ಮಾಡಿದ್ದಾರೆ. ಎಂಟಿಬಿ ನಾಗರಾಜ್ 12 ಕೋಟಿ ರೂ. ಕಾರಿನಲ್ಲಿ ಓಡಾಡುತ್ತಾರೆ. ಆದರೆ ಅವರೂ ಸಹ ಮಾರಾಟವಾಗಿದ್ದಾರಾ? ಎಂದು ಪ್ರಶ್ನಿಸಿದ ಅವರು ಆರೋಪ ಮಾಡುವಾಗ ಸತ್ಯಾಸತ್ಯತೆ ಅರಿವಿರಲಿ ಎಂದು ಟೀಕಿಸಿದರು.
ಅನರ್ಹ ಶಾಸಕರ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ಇದರ ನಡುವೆ ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ.

ಸ್ಪೀಕರ್ ಆದೇಶ ಹಾಗೂ ಅವರ ನಡವಳಿಕೆಗಳನ್ನು ಸುಪ್ರೀಂಕೋರ್ಟ್ ಗಮನಿಸಿದ್ದು ನಾಳೆ ಪ್ರಕರಣದ ವಿಚಾರಣೆ ನಡೆಯಲಿದೆ. ಇದರಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಮಾಧ್ಯಮಗಳು ಅನರ್ಹ ಶಾಸಕರು ಎನ್ನುವ ಪದ ಬಳಸಿದ್ದೀರಿ, ಯಾವ ಶಾಸಕರೂ ದುಡ್ಡಿಗಾಗಿ ಮಾರಿಕೊಂಡವರಲ್ಲ. ಜೊತೆಗೆ ಅಧಿಕಾರ ಪದವಿಗಾಗಿ ತ್ಯಾಗ ಮಾಡಿಲ್ಲ. ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣದ ಹುನ್ನಾರದಿಂದ ತೆಗೆದುಕೊಂಡ ತೀರ್ಮಾನವಿದು. 12 ಕೋಟಿ ಕಾರಿನಲ್ಲಿ ತಿರುಗುವ ಎಂಟಿಬಿ ನಾಗರಾಜ್ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ 80 ಕೋಟಿ ಹಣ ಚುನಾವಣೆ ಖರ್ಚಿಗಾಗಿ ನೀಡಿದ್ದರು. ಅಂತಹ ವ್ಯಕ್ತಿ ಹಣಕ್ಕೆ ತಮ್ಮನ್ನು ತಾವು ಮಾರಾಟ ಮಾಡಿಕೊಳ್ಳುವರೇ ಇದಕ್ಕೆ ಕಾಲವೇ ಉತ್ತರಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಹೇ ಆಯೋಗ್ಯ ಏನ್ ಮಾತಾಡ್ತೀಯಾ
ನಾವು ಜಮೀನ್ದಾರರು, ನಮ್ಮದು ಶ್ರೀಮಂತ ಕುಟುಂಬ, ನಾನು ಇಲ್ಲಿ ಎಲ್ಲೋ ಫಿಲಂ ಮಾಡಿಲ್ಲ. ಯಾರ ಮನೆಯ ಏಂಜಲು ತೊಳೆದಿಲ್ಲ. ರಾಮದಾಸ್ ಮನೆಯಲ್ಲಿ ಚಡ್ಡಿ ಒಗೆದಿಲ್ಲ. ನಾನು ನನ್ನ ಸಂಸಾರ ಉಳಿಸಲು ಮಾರಾಟವಾದೆ ಅನ್ನೋ ಪದ ಬಳಸಬೇಡ. ಹೇ ಅಯೋಗ್ಯ ಯಾರ ಬಗ್ಗೆ ಮಾತನಾಡ್ತೀಯಾ ಎಂದು ಮಾಜಿ ಸಚಿವ ತಾ.ರಾ. ಮಹೇಶ್ ವಿರುದ್ಧ ಏಕವಚನ ಬಳಸಿ ಟೀಕಾಪ್ರಹಾರ ನಡೆಸಿದರು.

ಏನಾದರೂ ಇದ್ದರೇ ಬಹಿರಂಗ ಚರ್ಚೆಗೆ ಬಾ. ಕುಮಾರಸ್ವಾಮಿ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತೆ. ನಿಮ್ಮ ಹಿಂದೆ ಇಂದು ಯಾರೂ ಇಲ್ಲ. ಜಿ.ಟಿ. ದೇವೇಗೌಡ ನಿಮ್ಮ ನಾಯಕರಲ್ಲವೇ ? ಅವರ ವಿರುದ್ಧ ಲಘುವಾಗಿ ಏಕೆ ಮಾತನಾಡಿದ್ದೀರಿ. ಅವರು ಸಿಟಿಂಗ್ ಮುಖ್ಯಮಂತ್ರಿಯನ್ನು ಸೋಲಿಸಿದ ವ್ಯಕ್ತಿ. ಆ ವ್ಯಕ್ತಿಯ ಬಗ್ಗೆ ಹಗುರ ಟೀಕೆ ಸಲ್ಲದು. ಸಿದ್ದರಾಮಯ್ಯ ಕೂಡ ಈ ರಾಜ್ಯದ ಸಿಎಂ ಆಗಿದ್ದವರು. ಯಾರ ಬಗ್ಗೆ ಮಾತನಾಡುವಾಗಲೂ ಸತ್ಯಾಸತ್ಯತೆ ಅರಿತು ಮಾತನಾಡಬೇಕು ಎಂದು ಟಾಂಗ್ ನೀಡಿದರು.

Leave a Comment