ಸತತ 7 ಗಂಟೆ ವಿಚಾರಣೆ ಬಳಿಕ ‘ಇಡಿ’ ಕಚೇರಿಯಿಂದ ಡಿಕೆಶಿ ಪುತ್ರಿ ವಾಪಸ್

ನವದೆಹಲಿ.ಸೆ.12. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ . ಇಂದು ಡಿಕೆಶಿ ಪುತ್ರಿ ಐಶ್ವರ್ಯ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿ ಮಾಹಿತಿ ಸಂಗ್ರಹಿಸಿದ್ದು, ಸತತ 7 ಗಂಟೆಗಳ ಬಳಿಕ ಡಿಕೆಶಿ ಪುತ್ರಿ ಐಶ್ವರ್ಯ ವಾಪಸ್ ಆಗಿದ್ದಾರೆ.

ಡಿಕೆ ಶಿವಕುಮಾರ್ ಅವರನ್ನು ಇತ್ತೀಚೆಗೆ ಇಡಿ ವಿಚಾರಣೆಗೆ ಒಳಪಡಿಸಿದ ನಂತರ ಬಂಧಿಸಿದ ಬಳಿಕ ಡಿಕೆಶಿ ಪುತ್ರಿ ಐಶ್ವರ್ಯ ಕೂಡ ಇಡಿ ವಿಚಾರಣೆ ಎದುರಿಸಿದ್ದಾರೆ. ಇಡಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದಿನ ವಿಚಾರಣೆಯನ್ನು ಐಶ್ವರ್ಯಾ ಎದುರಿಸಿದ್ದಾರೆ.

ಇಂದು ಡಿಕೆಶಿ ಪುತ್ರಿ ಐಶ್ವರ್ಯ ಇಡಿ ಕಚೇರಿಗೆ ಹಾಜರಾಗಿದ್ದು, ಈ ವೇಳೆ, ತನಿಖಾಧಿಕಾರಿಗಳು ಭಾರಿ ಪ್ರಮಾಣದಲ್ಲಿ ಹಣ ವರ್ಗಾವಣೆ ಕುರಿತಂತೆ ಪ್ರಶ್ನೆಗಳನ್ನು ಕೇಳಿದ್ದಾರೆ. ಐಶ್ವರ್ಯ ಹೆಸರಿನಲ್ಲಿ 108 ಕೋಟಿ ಹಣ ವ್ಯವಹಾರದ ಬಗ್ಗೆಯೂ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇಡಿ ಅಧಿಕಾರಿಗಳು ನಿಮ್ಮ ತಂದೆ ನಿಮ್ಮ ವ್ಯವಹಾರದಲ್ಲಿ ಭಾಗಿಯಾಗಿದ್ದಾರಾ, ಕಾಫಿ ಡೇ ಖಾತೆಗೆ ವರ್ಗಾವಣೆಯಾದ ಹಣದ ಮೂಲ ಯಾವುದು ಎಂಬೆಲ್ಲ ಪ್ರಶ್ನೆಗಳನ್ನು ಐಶ್ವರ್ಯ ಅವರಿಗೆ ಕೇಳಿದ್ದಾರೆ. ಇನ್ನು ಐಶ್ವರ್ಯ ಅವರ ಬ್ಯಾಂಕ್ ಅಕೌಂಟ್ ನ್ನು ಜಾಲಾಡಿದ್ದು, ಮಾಹಿತಿ ಸಂಗ್ರಹಿಸಿದ್ದಾರೆ.

Leave a Comment