ಸಣ್ಣ ಉದ್ದಿಮೆಗಳಿಗೆ ಪ್ರತ್ಯೇಕ ನಿರ್ದೇಶನಾಲಯ ಖಾಸಿಯಾ ಮನವಿ

ಬೆಂಗಳೂರು, ಫೆ. ೧೭- ಲೀಸ್ ಕಂ ಸೇಲ್ ನೀತಿಯನ್ನು ಮರು ಜಾರಿಗೊಳಿಸಬೇಕು. ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ನಿರ್ದೇಶನಾಲಯ ಪ್ರಾರಂಭಿಸಬೇಕು ಹಾಗೂ ಖಾಸಿಯಾ ಸಂಸ್ಥೆಗೆ 5 ಕೋಟಿ ರೂ. ಗಳ ವಿಶೇಷ ಅನುದಾನ ನೀಡಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಖಾಸಿಯಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ 2017-18ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಖಾಸಿಯಾ ಅಧ್ಯಕ್ಷ ಎ. ಪದ್ಮನಾಭ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳಿಗೆ ಈ ಕುರಿತು ಮನವಿ ಸಲ್ಲಿಸಿದೆ.
ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪುದುಚೇರಿಗಳಲ್ಲಿ ಲೀಸ್ ಕಂ ಸೇಲ್ ನೀತಿ ಹಾಗೂ 99 ವರ್ಷ ಲೀಸ್ ಎರಡನ್ನೂ ಪರಿಗಣಿಸುತ್ತಿದ್ದು, ನಮ್ಮ ರಾಜ್ಯದಲ್ಲೂ ಇಂತಹದ್ದೆ ನೀತಿಯನ್ನು ಜಾರಿ ಮಾಡಬೇಕು ಎಂದು ಖಾಸಿಯಾ ಮನವಿ ಮಾಡಿದೆ.
ಕೈಗಾರಿಕಾ ಟೌನ್‌ಶಿಪ್‌ಗಳ ಘೋಷಣೆ, ಖಾಸಿಯಾ ವಸಾಹತುಗಳಿಗೆ ಜಮೀನನ್ನು ಕೆಐಎಡಿಬಿ ಭೂಸ್ವಾಧೀನ ದರದಲ್ಲೇ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು. ಅತಿ ಸಣ್ಣ ಕೈಗಾರಿಕಾ ವಲಯಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಮಂಡಿಸಲಾಗಿದೆ.
ವಿದ್ಯಾವಂತ ನಿರುದ್ಯೋಗಿಗಳಿಗೆ ಐಎಸ್‌ಬಿ ಚಟುವಟಿಕೆ ಪ್ರಾರಂಭಿಸಲು ಸಣ್ಣ ಮಳಿಗೆಗಳ ನಿರ್ಮಾಣ, ಮಹಿಳಾ ಉದ್ಯಮದಾರರಿಗೆ ಶೇ. 4ರ ಬಡ್ಡಿಯಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ತರಬೇಕು. ಮಹಾನಗರ ಪಾಲಿಕೆ, ನಗರಸಭೆಗಳು ವಸೂಲಿ ಮಾಡುವ ಆಸ್ತಿ ತೆರಿಗೆಯನ್ನು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಉಪಯೋಗಿಸಬೇಕು ಎಂದು ಕೋರಲಾಗಿದೆ.
ಎಂಎಸ್ಇ ಘಟಕಗಳ ಕಾರ್ಮಿಕರಿಗೆ ವೃತ್ತಿ ತೆರಿಗೆಯನ್ನು ವಿನಾಯ್ತಿ ನೀಡಬೇಕು. ಎಲ್ಇಡಿ ಮೇಲೆ ವ್ಯಾಟ್‌ನ್ನು ಶೇ. 14.5ರ ಬದಲಿಗೆ ಶೇ. 5 ಕ್ಕೆ ಇಳಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ 20 ಲೀಟರ್ ಮೇಲಿನ ಕ್ಯಾನ್‌ಗಳ ಮೇಲಿನ ವ್ಯಾಟ್ ತೆರಿಗೆಯನ್ನು ಶೇ. 14.5 ರಿಂದ ಶೇ. 5 ಕ್ಕೆ ಇಳಿಸಬೇಕು. ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿಗೆ ಆಸ್ತಿ ತೆರಿಗೆ ಪರಿಷ್ಕರಣೆ ಜತೆಗೆ ಕೈಗಾರಿಕಾ ಕಾರ್ಮಿಕರಿಗೆ ವಸತಿ ಭಾಗ್ಯ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಕಾಲೇಜುಗಳಲ್ಲಿ ಉದ್ಯಮಶೀಲರ ಕ್ಲಬ್ ಸ್ಥಾಪನೆ ಮಾಡಬೇಕು. ಕೈಗಾರಿಕಾ ವಸಾಹತುಗಳಲ್ಲಿ ಮೂಲಭೂತ ಸೌಕರ್ಯಗಳ ಉನ್ನತೀಕರಣ ಹಾಗೂ ವ್ಯಾಟ್ ತೆರಿಗೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು. ನಿಯಮಾವಳಿಗಳನ್ನು ಸರಳೀಕರಣಗೊಳಿಸಬೇಕು ಎಂದು ನಿಯೋಗ ಸಿದ್ಧರಾಮಯ್ಯ ಅವರನ್ನು ಕೋರಿದೆ.

Leave a Comment