ಸಡಗರ ಸಂಭ್ರಮದ ಮಾರಿಕಾಂಬಾ ದೇವಿ ಜಾತ್ರೆ

ಧಾರವಾಡ ಅ.9-: ಇಲ್ಲಿಯ ಲಕ್ಷ್ಮಿಸಿಂಗನಕೇರಿಯಲ್ಲಿರುವ ಶ್ರೀ ಮಾರಿಕಾಂಬಾ ದೇವಿಯ ಹದಿನೈದನೇ  ವರ್ಷದ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ಶ್ರೀ ಮಾರಿಕಾಂಬಾ ದೇವಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಯುವ ಅಭಿವೃದ್ದಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಈ ಜಾತ್ರೆಯ  ಸಮಾರಂಭವನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಉದ್ಘಾಟಿಸಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಕಡವಾಲೆ ಕುಟುಂಬದವರು ಕಳೆದ ಹಲವು ವರ್ಷಗಳಿಂದ ಮಾರಿಕಾಂಬಾ ದೇವಿಯ ಜಾತ್ರೆಯನ್ನು ಅತ್ಯಂತ ಶ್ರದ್ದಾ ಭಕ್ತಿಯಿಂದ ಹಮ್ಮಿಕೊಂಡು ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಒಂಬತ್ತು ದಿನ ಕಾಲ ದೇವಿಯ ಪ್ರಾರ್ಥನೆ, ಪೂಜೆ, ಆರಾಧನೆ ಮಾಡುವುದರಿಂದ ಸಕಲರಿಗೆ ನೆಮ್ಮದಿ, ಆರೋಗ್ಯ ಪ್ರಾಪ್ತಿಯಾಗುತ್ತದೆ. ಮನಸ್ಸಿಗೆ ಉಲ್ಲಾಸ ಹಾಗೂ ಸಂತೋಷ ಸಿಗುವುದರಿಂದ ಎಲ್ಲಡೆ ಸಂಭ್ರಮ ಮನೆ ಮಾಡಲು ಸಾಧ್ಯವಾಗಲಿದೆ. ಜಾತ್ರೆಯ ಹೆಸರಿನಲ್ಲಿ ಎಲ್ಲರೂ ಒಂದೆಡೆ ಸೇರುವ ಮೂಲಕ ನಮ್ಮ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಯುವ ಮೂಲಕ ಮುಂದಿನ ಪಿಳಿಗೆಗೆ ಅದನ್ನು ಪರಿಚಯಿಸಿಕೊಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದರ ಅಧ್ಯಕ್ಷತೆಯನ್ನು ಜಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಮುತ್ತುರಾಜ್ ಮಾಕಡವಾಲೆ ವಹಿಸಿದ್ದರು.
ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಕಾಂಗ್ರೆಸ್ ಮುಖಂಡರಾದ ಸದಾನಂದ ಡಂಗನವರ, ಅಲ್ತಾಫ್ ಹಳ್ಳೂರ, ಮಹಾನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಾಜಣ್ಣ ಕೊರವಿ, ಶ್ರೀ ಮಾರಿಕಾಂಬಾ ದೇವಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಯುವ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಮಾರುತಿ ಆರ್ ಮಾಕಡವಾಲೆ, ಕಾಂಗ್ರೆಸ್ ಮುಖಂಡರಾದ ಗಂಗರಾಜ ಗೋ. ಮಾಕಡವಾಲೆ, ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ದಳ ರಾಜ್ಯಾಧ್ಯಕ್ಷ ಶಂಕರ್ ಆರ್. ಮಾಕಡವಾಲೆ, ಎಸಿಹೆಚ್ ಆರ್. ಉತ್ತರ ಕರ್ನಾಟಕ ಅಧ್ಯಕ್ಷ ಪರಶುರಾಮ ಮಾಕಡವಾಲೆ, ಧಾರವಾಡ ಯೂಥ್ ಕ್ಲಬ್ ಅಧ್ಯಕ್ಷ ಗೋವಿಂದರಾಜ ಎಂ ಮಾಕಡವಾಲೆ, ಶಿವರಾಜ ಮಾಕಡವಾಲೆ, ಬಸವರಾಜ ಮಾಕಡವಾಲೆ, ಹನುಮಂತರಾಜ ಮಾಕಡವಾಲೆ, ಛತ್ರಪತಿ ಪಿರಗಿ, ರಾಘವೇಂದ್ರ ಮಾಕಡವಾಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment