ಸಡಗರ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

 ಮುಸ್ಲೀಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ
ರಾಯಚೂರು.ಆ.22- ತ್ಯಾಗ – ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ ಸೇರಿ ಜಿಲ್ಲೆಯಾದ್ಯಂತ ಶಾಂತಿ, ಸೌಹಾರ್ದಯುತವಾಗಿ ಆಚರಿಸಲಾಯಿತು.
ಹಬ್ಬ ನಿಮಿತ್ಯ ಇಂದು ಸ್ಥಳೀಯ ಈದ್ಗಾ ಮೈದಾನದಲ್ಲಿ ಅಸಂಖ್ಯಾತ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಎಲ್ಲಾ ಜನರಿಗೆ ದೇವರು ಸಮೃದ್ಧಿಯುತ ಸುಖ, ಶಾಂತಿ ದಯಪಾಲಿಸಲೆಂದು ಅಲ್ಲಾಃನಲ್ಲಿ ಪ್ರಾರ್ಥಿಸಲಾಯಿತು. ಪವಿತ್ರ ಹಬ್ಬದ ಅಂಗವಾಗಿ ಸಾವಿರಾರು ಮುಸ್ಲಿಂ ಬಾಂಧವರು ನೂತನ ಉಡುಪು ಧರಿಸಿ ಸಾಮೂಹಿಕ ಪ್ರಾರ್ಥನೆ ನಂತರ ಪರಸ್ಪರರು ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಾರ್ಥನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆ ಟಿಪ್ಪುಸುಲ್ತಾನ್ ಮತ್ತು ಬಸವೇಶ್ವರ ವೃತ್ತದಲ್ಲಿ ವಾಹನ ಸಂಚಾರ ಕಡಿತಗೊಳಿಸಲಾಗಿತ್ತು. ನಗರದಾದ್ಯಂತ ಹಮ್ಮಿಕೊಂಡ ಸಾಮೂಹಿಕ ಪ್ರಾರ್ಥನೆ ಶಾಂತಿಯುತವಾಗಿ ನೆರವೇರಿತು.
ಶಾಸಕ ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು, ಮಾಜಿ ಶಾಸಕ ಸೈಯದ್ ಯಾಸೀನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ್, ನಗರಸಭೆ ಪೌರಾಯುಕ್ತ ರಮೇಶ್ ನಾಯಕ ಸೇರಿದಂತೆ ಇನ್ನಿತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment