ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಸಚಿವ  

ಮೀನುಗಾರರ ನಾಪತ್ತೆ ಪ್ರಕರಣ

ಉಡುಪಿ, ಜ.೧೦ ಬೋಟು ಸಹಿತ ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವಿಸಲಾಗುವುದು ಎಂದು ರಾಜ್ಯ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೀನುಗಾರರ ನಾಪತ್ತೆ ಸಂಬಂಧ ಬುಧವಾರ ನಡೆದ ಜನಪ್ರತಿನಿಧಿಗಳ, ಅಧಿಕಾರಿಗಳ, ಮೀನುಗಾರ ಮುಖಂಡರ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಇತರ ಸಂಪುಟ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗು ವುದು ಎಂದು ಅವರು ಭರವಸೆ ನೀಡಿದರು. ಮಹಾರಾಷ್ಟ್ರ ಮತ್ತು ಗೋವಾ ವ್ಯಾಪ್ತಿಯಲ್ಲಿ ಹುಡುಕಾಟ ತೀವ್ರಗೊಳಿಸಲು ಮೀನುಗಾರ ಮುಖಂಡರು ಒತ್ತಾಯಿಸುತ್ತಿದ್ದು, ಅಲ್ಲಿನ ಸರಕಾರಗಳೊಂದಿಗೆ ಉನ್ನತ ಮಟ್ಟದಲ್ಲಿ ಚರ್ಚಿಸಲು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ನಾಪತ್ತೆಯಾಗಿರುವ ಕೆಲವು ಮೀನುಗಾರರ ಕುಟುಂಬಗಳು ಜೀವನ ನಿರ್ವ ಹಣೆಗೆ ಸಂಕಷ್ಟ ಪಡುತ್ತಿರುವ ಬಗ್ಗೆ ಸರಕಾರದ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಾತ್ಕಾಲಿಕವಾಗಿ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಲ್ಲಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ, ಮೀನುಗಾರ ಮುಖಂಡರಾದ ಸತೀಶ್ ಕುಂದರ್, ಗುಂಡು ಅಮೀನ್, ಯಶ್ಪಾಲ್ ಸುವರ್ಣ, ಆರ್.ಕೆ.ಗೋಪಾಲ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.

Leave a Comment