ಸಚಿವ ರೈ ರಾಜೀನಾಮೆಗೆ ಬಿಜೆಪಿ ಆಗ್ರಹ : ಅಸೆಂಬ್ಲಿಯಲ್ಲಿ ವಾಗ್ವಾದ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜೂ. ೧೯- ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ದ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ಕಟ್ಟಪ್ಪಣೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಅರಣ್ಯ ಸಚಿವ ರಮಾನಾಥ ರೈ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಿಂದ ಕೈ ಬಿಡಬೇಕು ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿಂದು ಏರಿದ ಧ್ವನಿಯಲ್ಲಿ ಆಗ್ರಹಿಸಿದ್ದರಿಂದ ಸದನದಲ್ಲಿ ಭಾರಿ ಕೋಲಾಹಲ, ಗದ್ದಲ ಉಂಟಾಗಿತ್ತು.

ಸಚಿವ ರಮಾನಾಥ ರೈ ರಾಜೀನಾಮೆಗೆ ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದಾಗ ಅದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ವಾದ-ವಾಗ್ವಾದ, ಮಾತಿನ ಚಕಮಕಿ ನಡೆದು ಸದನದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.

ಇಂದು ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್ ವಿಷಯ ಪ್ರಸ್ತಾಪಿಸಿ ಆರ್ಎಸ್ಎಸ್‌ನ ಪ್ರಮುಖ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ದ ಐಪಿಸಿ ಸೆಕ್ಷನ್ 307ರ ಪ್ರಕಾರ ಮೊಕದ್ದಮೆ ದಾಖಲಿಸಿ ಒದ್ದು ಒಳಗಡೆ ಹಾಕಿ ಎಂದು ಅರಣ್ಯ ಸಚಿವ ರಮಾನಾಥ ರೈ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಿರುವುದು ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ರೈ ಅವರು ಸಚಿವರಾಗಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಡದಿದ್ದರೆ ಅವರನ್ನು ಸಂಪುಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈ ಬಿಡಬೇಕು ಎಂದು ಪಟ್ಟು ಹಿಡಿದರು.

ಪೊಲೀಸ್ ಇಲಾಖೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ದುರುಪಯೋಗಪಡಿಸಿಕೊಂಡಿದ್ದಾರೆ. ಆರ್ಎಸ್ಎಸ್ ಮುಖಂಡರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಜವಾಬ್ದಾರಿ ಸ್ಥಾನದಲ್ಲಿರೋ ಸಚಿವರ ವರ್ತನೆ ಸರಿಯಲ್ಲ. ಪೊಲೀಸರಿಗೆ ಸಚಿವರೆ ಪ್ರಚೋದನೆ ನೀಡಿರುವುದು ಕಂಡು ಬಂದಿದೆ ಎಂದರು. ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗಳ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಕೋಮು ಗಲಭೆಗಳಿಗೆ ‌ಡ್ರಗ್ ಮಾಫಿಯಾ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೆ ಹೇಳಿದ್ದಾರೆ. ಈ ಗಲಭೆಗಳಿಗೂ, ಭಟ್‌ರವರಿಗೂ ಯಾವುದೇ ಸಂಬಂಧವಿಲ್ಲ. ಹೀಗಿದ್ದರೂ ಭಟ್‌ರವರ ಬಂಧನಕ್ಕೆ ಸಚಿವರು ಸೂಚಿಸುವ ಮೂಲಕ ಗಲಭೆಗಳಿಗೆ ಪ್ರಚೋದನೆ ನೀಡಿದ್ದಾರೆ ಎಂದು ಶೆಟ್ಟರ್ ಟೀಕಿಸಿದರು.

ಪ್ರಭಾಕರ್‌ ಭಟ್‌ ಅವರ ವಿರುದ್ದ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿರುವ ಸಚಿವ ರಮಾನಾಥ್ ರೈ ಈ ಕೂಡಲೇ ಆರ್ಎಸ್ಎಸ್ ಮುಖಂಡರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಜಗದೀಶ್‌ಶೆಟ್ಟರ್‌ರವರ ಒತ್ತಾಯಕ್ಕೆ ಬಿಜೆಪಿ ಸದಸ್ಯರಾದ ಗೋವಿಂದ ಕಾರಜೋಳ, ಬೋಪಯ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಅಂಗಾರ, ಸುನೀಲ್‌ಕುಮಾರ್ ಅಪ್ಪಚ್ಚು ರಂಜನ್ ಮುಂತಾದವರು ದ್ವನಿಗೂಡಿಸಿ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದರು.  ಈ ಹಂತದಲ್ಲಿ ಆಡಳಿತ ಪಕ್ಷದ ಅಭಯಚಂದ್ರ, ಮೊಯಿದ್ದೀನ್ ಭಾವ, ಲೊಬೊ, ಸಚಿವರಾದ ಪ್ರಮೋದ್ ಮಧ್ವರಾಜ್, ರೋಷನ್‌ಬೇಗ್ ಮುಂತಾದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಆಗ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಆರೋಪ, ಪ್ರತ್ಯಾರೋಪ ಕೇಳಿ ಬಂದು ಇಡೀ ಸದನ ಕೆಲ ಹೊತ್ತು ಗೊಂದಲದ ಗೂಡಾಗಿತ್ತು.  ಬಿಜೆಪಿ ಸದಸ್ಯರ ಗದ್ದಲದ ನ‌ಡುವೆ ಸಚಿವರ ರಮಾನಾಥ ರೈ ಸದನದಕ್ಕೆ ಹಾಜರಾಗಿ ಹೇಳಿಕೆ ನೀಡಲು ಮುಂದಾದರು.
ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಸಚಿವ ರೈ ಅವರೆ ಉತ್ತರ ಕೊಡುತ್ತಾರೋ ಅಥವಾ ಸರ್ಕಾರ ಉತ್ತರ ಕೊಡುತ್ತೊ ಎಂದಾಗ, ಮಧ್ಯ ಪ್ರವೇಶಿಸಿದ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ರೈ ಅವರು ಮೊದಲು ತಮ್ಮ ಹೇಳಿಕೆಯನ್ನು ನೀಡಲಿ. ಆ ಮೇಲೆ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಹೇಳಿದರು.

ಸಚಿವ ರಮಾನಾಥ ರೈ ಕಲ್ಲಡ್ಕದಲ್ಲಿ ನಡೆದ ಕೋಮು ಗಲಭೆಗಳಿಗೆ ಕಲ್ಲಡ್ಕ ಪ್ರಭಾಕರ ಭಟ್‌ರ ಪ್ರಚೋದನಕಾರಿ ಹೇಳಿಕೆ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಗಮನಕ್ಕೆ ತಂದಾಗ ಯಾರೇ ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಅವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದೇನೆ. ಭಟ್‌ರವರ ವಿರುದ್ದ ಐಪಿಸಿ ಸೆಕ್ಷನ್ 307ರ ಪ್ರಕಾರ ಕ್ರಮ ಕೈಗೊಳ್ಳಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಗ್ರಾ.ಪಂ. ಸದಸ್ಯರೊಬ್ಬರನ್ನು ಹಾಡಹಗಲೇ ಕೊಲೆ ಮಾಡಲಾಗಿದೆ. ಇದರಲ್ಲಿ ಸಂಘ ಪರಿವಾರದವರ ಕೈವಾಡವಿದೆ ಎಂದು ಸಚಿವರು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತಲ್ಲದೆ, ಎಲ್ಲರೂ ಒಮ್ಮೆಲೆ ಸಚಿವರ ಮೇಲೆ ಮುಗಿ ಬಿದ್ದರು. ಆಗಲೂ ಸದನದಲ್ಲಿ ಭಾರಿ ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.

ನಾನು ಯಾವುದೇ ಜಾತಿ, ಧರ್ಮಕ್ಕೆ ಸೇರಿದವನಲ್ಲ. ಹಿಂದೂ ಮತ್ತು ಮುಸ್ಲಿಂ ಮತೀಯ ಸಂಘಟನೆಗಳು ತಮ್ಮ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಮುಗಿ ಬೀಳುತ್ತಿವೆ. ಅದರ ನಡುವೆಯೂ ನಾನು ಸಾಮರಸ್ಯ ಕಾಪಾಡಿಕೊಳ್ಳಲು ಬದ್ದತೆ ತೋರಿದ್ದೇನೆ. ನಾನು ಯಾವುದೇ ಕೊಲೆ ಆರೋಪಿಗಳಿಗೆ ಬೆಂಬಲ ನೀಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಸವಾಲೆಸೆದರು.
ಮತೀಯ ಸಂಘಟನೆಗಳ ವಿರೋಧದ ನಡುವೆಯೂ 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಎಲ್ಲರ ಪ್ರೀತಿ ಗಳಿಸಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರಭಾಕರ ಭಟ್‌ರವರ ಊರಲ್ಲೂ ನನಗೆ ಜನರ ಬೆಂಬಲ ಹೆಚ್ಚಾಗಿದೆ ಎಂದರು.

ಎರಡೂ ಕಡೆಯ ವಾದ ಆಲಿಸಿದ ಸಭಾಧ್ಯಕ್ಷ ಕೋಳಿವಾಡ್ ಸರ್ಕಾರದಿಂದ ಉತ್ತರ ಕೊಡಿಸುತ್ತೇನೆ. ನಿಮ್ಮ ಬಳಿ ದಾಖಲೆಗಳಿದ್ದರೆ ಕೊಡಿ ಎಂದು ಸೂಚಿಸಿದರು.  ಇಂದು ಮಧ್ಯಾಹ್ನವೇ ಗೃಹ ಸಚಿವರಿಂದ ಉತ್ತರ ಕೊಡಿಸಬೇಕು ಎಂದು ಶೆಟ್ಟರ್ ಒತ್ತಾಯಿಸಿದರು. ಆದರೂ ಸರ್ಕಾರದಿಂದ ಉತ್ತರ ಕೊಡಿಸುತ್ತೇನೆ ಎಂದು ಸಭಾಧ್ಯಕ್ಷರು ಹೇಳಿದಾಗ ಕಾವೇರಿದ ಚರ್ಚೆಗೆ ತೆರೆ ಬಿತ್ತು.

Leave a Comment