ಸಚಿವ ಜೇಟ್ಲಿ ರಾಜೀನಾಮೆಗೆ ರಾಹುಲ್ ಆಗ್ರಹ

ನವದೆಹಲಿ, ಸೆ. ೧೪- ನಾನು ದೇಶ ತೊರೆಯುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದೆ ಎಂದು ಭಾರತದ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರೂ. ಪಂಗನಾಮ ಹಾಕಿ ಲಂಡನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಸಚಿವ ಜೇಟ್ಲಿ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ 15 ರಿಂದ 20 ನಿಮಿಷಗಳ ಕಾಲ ಇವರಿಬ್ಬರ ನಡುವೆ ನಡೆದಿರುವ ಮಾತುಕತೆಗಳ ಸಿಸಿಟಿವಿ ದೃಶ್ಯಗಳನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.
2016 ರಲ್ಲಿ ದೇಶ ಬಿಡುವ ಮುನ್ನ ವಿತ್ತ ಸಚಿವ ಜೇಟ್ಲಿ ಅವರನ್ನು ಭೇಟಿ ಮಾಡಿದ್ದಾಗಿ ವಿಜಯ್ ಮಲ್ಯ ಹೇಳಿದ್ದಾರೆ. ಅದಕ್ಕೆ ಕಾಂಗ್ರೆಸ್ ಮುಖಂಡ ಪಿ.ಎಲ್. ಪುನಿಯಾ ಸಾಕ್ಷಿ ಇದ್ದಾರೆ. ಆದರೆ ಈ ಬಗ್ಗೆ ಮಂತ್ರಿ ಜೇಟ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಆಪಾದಿಸಿದ್ದಾರೆ.
ಮದ್ಯದ ದೊರೆ ವಿಜಯ್ ಮಲ್ಯ ದೇಶ ತೊರೆಯುವ 2 ದಿನದ ಮೊದಲು ಸಂಸತ್‌ನಲ್ಲಿಯೇ ಜೇಟ್ಲಿಯವರೊಂದಿಗೆ 15 ರಿಂದ 20 ನಿಮಿಷಗಳ ಕಾಲ ಮಾತುಕತೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಕ್ರಿಮಿನಲ್ ಮಲ್ಯ ಜೊತೆ ಜೇಟ್ಲಿ ಒಳಒಪ್ಪಂದವೇನು ಎಂಬುದನ್ನು ಹಣಕಾಸು ಸಚಿವರೇ ದೇಶದ ಜನತೆಗೆ ವಿವರಣೆ ನೀಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಜೇಟ್ಲಿ ಮತ್ತು ಮಲ್ಯ ಸಂಸತ್ ಭವನದ ಸೆಂಟ್ರಲ್ ಹಾಲ್‌‌ನ ಕಾರ್ನರ್‌ನಲ್ಲಿ ನಿಂತು ಮಾತನಾಡುತ್ತಿದ್ದುದನ್ನು ನಾನೇ ಪ್ರತ್ಯಕ್ಷವಾಗಿ ನೋಡಿದ್ದೇನೆ ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ಪುನಿಯಾ, ನೀವು ಮಾತನಾಡುತ್ತಿದ್ದುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾನು ಹೇಳಿದ್ದು ತಪ್ಪಾಗಿದ್ದರೆ, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಜೇಟ್ಲಿಗೆ ಸವಾಲು ಹಾಕಿದ್ದಾರೆ.
ಮಲ್ಯ ಜೊತೆ ನೀವು ನಡೆಸಿದ ಮಾತುಕತೆ ಬಗ್ಗೆ ನೀವೇ ದೇಶದ ಜನತೆ ಮುಂದೆ ಬಹಿರಂಗ ಹೇಳಿಕೆ ನೀಡಬೇಕು. ಯಾವ ಒಪ್ಪಂದ ನಡೆದಿದೆ ಎಂಬುದನ್ನು ತಿಳಿಸಬೇಕು. ಕೂಡಲೇ ಜೇಟ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಈ ಬಗ್ಗೆ ತನಿಖೆ ನಡೆಸಲೇಬೇಕೆಂದು ರಾಹುಲ್ ಆಗ್ರಹಿಸಿದ್ದಾರೆ.

Leave a Comment