ಸಚಿವಾಕಾಂಕ್ಷಿಗಳ ಲಾಬಿ ಬಿರುಸು

ಬೆಂಗಳೂರು, ಆ. ೧೪- ಬಿಜೆಪಿ ವರಿಷ್ಠರ ಸೂಚನೆಯಂತೆ ಇದೇ 16 ರಂದು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಭೇಟಿ ಸಂದರ್ಭದಲ್ಲಿ ಸಚಿವ ಸಂಪುಟ ರಚನೆ ಕುರಿತು ವರಿಷ್ಠರ ಒಪ್ಪಿಗೆ ಪಡೆಯುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಹಿರಿಯ ಮತ್ತು ಕಿರಿಯ ಶಾಸಕರು ತೀವ್ರ ಲಾಬಿಯಲ್ಲಿ ತೊಡಗಿದ್ದಾರೆ.

* ನಾಳಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಪ್ರಯಾಣ.
* ಬಿಜೆಪಿ ವರಿಷ್ಠರ ಸೂಚನೆಯಂತೆ ರಾಷ್ಟ್ರ ರಾಜಧಾನಿಗೆ ಭೇಟಿ.
* ಸಚಿವ ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ಚರ್ಚೆ.
* ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್ 18 ಅಥವಾ 19 ರಂದು ಸಚಿವ ಸಂಪುಟ ರಚನೆ.
* ಮೊದಲ ಕಂತಿನಲ್ಲಿ 10 ರಿಂದ 12 ಮಂದಿಗೆ ಸಚಿವ ಸ್ಥಾನ.
* ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿ ತಲುಪಲಿರುವ ಬಿಎಸ್‌ವೈ.

ವರಿಷ್ಠರ ಸೂಚನೆ ಮೇರೆಗೆ ಯಡಿಯೂರಪ್ಪ ಅವರು, ದೆಹಲಿಗೆ ತೆರಳಲಿದ್ದು, ಮೊದಲ ಕಂತಿನಲ್ಲಿ 10 ರಿಂದ 12 ಮಂದಿ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ವಿಸ್ತರಣೆ ಮಾಡಲು ಚಿಂತನೆ ನಡೆಸಿದ್ದಾರೆ. ವರಿಷ್ಠರ ಒಪ್ಪಿಗೆ ಪಡೆಯುವ ಉಮೇದಿನಲ್ಲಿ ದೆಹಲಿಯತ್ತ ಮುಖಮಾಡಿದ್ದಾರೆ. ಸಚಿವ ಸಂಪುಟ ರಚನೆಯ ಅನಿವಾರ್ಯತೆ ಕುರಿತು, ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿರುವ ಯಡಿಯೂರಪ್ಪ ಅವರು, ಈ ಬಾರಿ ವರಿಷ್ಠರಿಂದ ಒಪ್ಪಿಗೆ ಪಡೆದೇ ರಾಜ್ಯಕ್ಕೆ ವಾಪಸಾಗುವ ಸೂಚನೆಗಳಿವೆ.
ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಿರುವ 17 ಮಂದಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು, ಹಿಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರ ಕ್ರಮವನ್ನು ಪ್ರಶ್ನಿಸಿ, ಸಲ್ಲಿಸಿರುವ ಮೇಲ್ಮನವಿಯ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಣೆ ಮಾಡಿರುವುದರಿಂದ ಈ ಶಾಸಕರುಗಳನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲೇಬೇಕೆಂಬ ಸಂದಿಗ್ಧ ಪರಿಸ್ಥಿತಿಯಿಂದ ನಿರಾಳವಾಗಿದ್ದಾರೆ. ಇದರಿಂದಾಗಿ ಸಚಿವ ಸಂಪುಟ ರಚನೆಯ ಹಾದಿ ಮತ್ತಷ್ಟು ಸುಗಮವಾಗಿದೆ.
ಎಲ್ಲವೂ ಅಂದುಕೊಂಡಂತಾದರೆ, ಭಾನುವಾರ ಅಥವಾ ಸೋಮವಾರ ಸಚಿವ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ. ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಯಡಿಯೂರಪ್ಪ ಅವರು, ದೆಹಲಿಗೆ ತೆರಳಲಿದ್ದು, ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳಲು ಶಾಸಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಲಾಬಿಗೆ ಮೊರೆಹೋಗಿರುವ ಶಾಸಕರು, ವರಿಷ್ಠ ನಾಯಕರು ಹಾಗೂ ತಮ್ಮ ನೆಚ್ಚಿನ ಗಾಡ್ ಫಾದರ್‌ಗಳ ಮೂಲಕ ಸಚಿವ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿದ್ದಾರೆ.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿ, ಮೂರು ವಾರಗಳು ಕಳೆದಿದ್ದರೂ, ಇನ್ನೂ ಸಚಿವ ಸಂಪುಟ ವಿಸ್ತರಣೆಯಾಗದಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪ್ರವಾಹ ಪೀಡಿತ ಜನರ ನೋವು-ನಲಿವುಗಳಿಗೆ ತಕ್ಷಣ ಸ್ಪಂದಿಸಲು, ಉಸ್ತುವಾರಿ ಸಚಿವರಿಲ್ಲದಿರುವುದೂ ಟೀಕೆಗೆ ಕಾರಣವಾಗಿದೆ.
ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಲು ರಾಜ್ಯಕ್ಕೆ ಆಗಮಿಸಿ, ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಚಿವ ಸಂಪುಟ ರಚನೆ ಕುರಿತು ಚರ್ಚಿಸಲು ಈ ತಿಂಗಳ 16 ರಂದು ದೆಹಲಿಗೆ ಬರುವಂತೆ, ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದರು.
ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ, ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ಯದಲ್ಲಿ ಉಂಟಾಗಿರುವ ಬರಪರಿಸ್ಥಿತಿ ಹಾಗೂ ಕೇಂದ್ರದ ಮಾಜಿ ಸಚಿವೆ ಸುಷ್ಮ ಸ್ವರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಸಚಿವ ಸಂಪುಟ ರಚನೆಗೆ ಪಕ್ಷದ ಹೈಕಮಾಂಡ್ ಹಸಿರು ನಿಶಾನೆ ತೋರಿರಲಿಲ್ಲ.
ಈ ಸದ್ಯಕ್ಕೆ ರಾಜ್ಯಾದ್ಯಂತ ಪ್ರವಾಹ ಪರಿಸ್ಥಿತಿ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ನದಿಗಳಲ್ಲೂ ಪ್ರವಾಹ ಮಟ್ಟ ಕಡಿಮೆಯಾಗಿದೆ. ಪರಿಹಾರ ಮತ್ತು ಪುನರ್ ವಸತಿ ಕಾರ್ಯಗಳತ್ತ ಪ್ರವಾಹ ಸಂತ್ರಸ್ತ ಜಿಲ್ಲೆಗಳಲ್ಲಿ ಸ್ಥಳೀಯ ಆಡಳಿತಗಳು ಸಮರೋಪಾದಿ ಕಾರ್ಯನಿರತವಾಗಿವೆ.
ನಾಳೆ 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯಲಿರುವ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಯಡಿಯೂರಪ್ಪ ಅವರು, ಮಾರನೇದಿನ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನದ ನಂತರ, ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಾಗದೆ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಾಧ್ಯವಾಗದಿರುವುದು ಮತ್ತು ಪ್ರವಾಹ ಪರಿಸ್ಥಿತಿಯನ್ನು ಖುದ್ದಾಗಿ ನಿಭಾಯಿಸಲು ಸಚಿವರ ಅನಿವಾರ್ಯತೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಯಡಿಯೂರಪ್ಪ ಅವರು ಮನವರಿಕೆ ಮಾಡಿಕೊಡಲಿದ್ದಾರೆ.
ಹಿರಿಯ ಶಾಸಕರಾದ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಿ.ಎಂ. ಉದಾಸಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಸಿ.ಟಿ. ರವಿ, ಕೆ.ಜಿ. ಬೋಪಯ್ಯ, ಬಿ. ಶ್ರೀರಾಮುಲು, ಜೆ.ಸಿ. ಮಾಧುಸ್ವಾಮಿ, ವಿ. ಸೋಮಣ್ಣ, ಬಾಲಚಂದ್ರ ಜಾರಕಿಹೊಳಿ, ಎಂ.ಪಿ. ರೇಣುಕಾಚಾರ್ಯ, ಶಶಿಕಲಾ ಜೊಲ್ಲೆ, ಡಾ. ಅಶ್ವತ್ಥ್ ನಾರಾಯಣ, ಶಿವನಗೌಡ ನಾಯಕ್, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ ಸೇರಿದಂತೆ, ಹಲವಾರು ಪ್ರಮುಖರಿಗೆ ಸಂಪುಟದಲ್ಲಿ ಸ್ಥಾನ ದೊರೆಯುವ ನಿರೀಕ್ಷೆ ಇದೆ.
ಹಿರಿಯರಲ್ಲದೆ, ಕಿರಿಯ ಶಾಸಕರು, ಪ್ರದೇಶ, ಜಾತಿವಾರು ಮುಂದಿಟ್ಟುಕೊಂಡು ಪ್ರಾತಿನಿಧ್ಯಕ್ಕಾಗಿ ಲಾಬಿಯಲ್ಲಿ ತೊಡಗಿದ್ದಾರೆ.
ಆದರೆ ಈ ವಿಚಾರದಲ್ಲಿ ಬಿಜೆಪಿ ವರಿಷ್ಠರ ತೀರ್ಮಾನವೇ ಅಂತಿಮವಾಗಲಿರುವುದರಿಂದ ಯಾಱ್ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

 

Leave a Comment