ಸಚಿವರ ವಿರುದ್ಧ ಹರಿಹಾಯ್ದ ಶಾಸಕ

=

ವಿಜಯಪುರ,ಜೂ.24-ಆಲಮಟ್ಟಿ ಜಲಾಶಯದ ನೀರನ್ನು ಎಂ.ಬಿ.ಪಾಟೀಲ್‍ರು ಖಾಲಿ ಮಾಡಿದ್ದಾರೆ ಎಂದು ಮಂತ್ರಿಗಳೊಬ್ಬರು ಹೇಳಿಕೆ ನೀಡಿದ್ದಾರೆ. ಎಂ.ಬಿ.ಪಾಟೀಲರೇನು ತಮ್ಮ ಹೊಲಕ್ಕೆ ನೀರು ಬಿಟ್ಟುಕೊಂಡಿಲ್ಲ. ರೈತರಿಗೆ ಅನುಕೂಲವಾಗಲಿ ಎಂದು ಕಾಲುವೆ ನಿರ್ಮಿಸಿ, ಅದರಲ್ಲಿ ನೀರು ಹರಿಸಿದ್ದಾರೆ. ಇದನ್ನೂ ಸಹ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಪರೋಕ್ಷವಾಗಿ ಸಚಿವ ಶಿವಾನಂದ ಪಾಟೀಲ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದರು.

ವಿಜಯಪುರದ ಎಂ.ಬಿ.ಪಾಟೀಲ್ ನಗರದ ಸಿ ಬ್ಲಾಕ್‍ನಲ್ಲಿ 1ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಎಂ.ಬಿ.ಪಾಟೀಲ್‍ರು ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಸ್ಮರಣೆಗಾಗಿ ಅವರ ಹೆಸರನ್ನು ಈ ಬಡಾವಣೆಗೆ ಇಟ್ಟಿದ್ದೀರಿ. ಒಳ್ಳೆಯವರು ಒಳ್ಳೆಯದನ್ನು ಮಾಡಿದರೆ, ಪ್ರಶಂಶಿಸುವುದು ನಮ್ಮ ಗುಣವಾಗಬೇಕು. ಆಗ ಕೆಲಸ ಮಾಡಿದವರಿಗೆ ಹುಮ್ಮಸ್ಸು ಬಂದು ಇನ್ನೂ ಹೆಚ್ಚು ಕೆಲಸ ಮಾಡಲು ಅನುಕೂಲವಾಗುತ್ತದೆ. ಈ ಕಾರಣಕ್ಕೆ ನಾನು ಎಂ.ಬಿ.ಪಾಟೀಲ್‍ರನ್ನು ಹೊಗಳಿದರೇ ನೀವು ಅವರ ಜೊತೆ ಅರ್ಜಷ್ಟ ಆಗಿ, ಅಂಡರ್ ಸ್ಟಾಂಡಿಂಗ್ ಮಾಡಿಕೊಂಡಿದ್ದೀರಿ ಎನ್ನುತ್ತಾರೆ. ಇನ್ನೊಬ್ಬರು ನಮ್ಮದೆ ಜಾತಿಯ ಮಂತ್ರಿಯಿದ್ದಾರೆ. ಅವರ ಜೊತೆಗೂ ಅಂಡರ್ ಸ್ಟಾಂಡಿಂಗ್ ಮಾಡಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ನನ್ನದು ಏನಿದ್ದರೂ ಒಳ್ಳೆಯ ಕೆಲಸ ಮಾಡುವವರ ಜೊತೆ ಮಾತ್ರ ಗೆಳೆತನ ಎಂದರು.

ಬೆಂಗಳೂರು ಮಹಾನಗರದ ನಂತರ ಸಾರ್ವಜನಿಕ ಉದ್ಯಾನಗಳಲ್ಲಿ ಅತೀ ಹೆಚ್ಚಿನ ಬಯಲು ಜಿಮ್ ಹೊಂದಿರುವ ನಗರ ವಿಜಯಪುರವಾಗಿದೆ, ಸಾರ್ವಜನಿಕ ಉದ್ಯಾನಗಳು ಜನರಿಗೆ ಬಳಕೆಯಾಗಬೇಕು. ಅಲ್ಲಿ ಗಿಡ ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುವದು. ಪ್ರತಿ ಉದ್ಯಾನಗಳಲ್ಲಿ ವಾಕಿಂಗ್ ಟ್ರ್ಯಾಕ್ ಮತ್ತು ಓಪನ್ ಜಿಮ್ ಕಲ್ಪಿಸಲು ಕ್ರಮಗಳನ್ನು ಜರುಗಿಸಲಾಗಿದೆ. ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಒಂದು ಗಿಡ ಹಾಗೂ ಉದ್ಯಾನಗಳಲ್ಲಿ ಒಂದು ಗಿಡ ಹಚ್ಚಿ ಬೆಳೆಸಲು ದತ್ತು ಪಡೆಯಬೇಕು ಎಂದರು.

ವಿಜಯಪುರ ಸ್ವಚ್ಛ, ಸುಂದರ ನಗರವಾಗಿಸಲು ಶ್ರಮಿಸುತ್ತಿದ್ದೇನೆ. ದುಷ್ಟರನ್ನು ದೂರವಿಟ್ಟಿದ್ದೇನೆ. ಪುಂಡ-ಪೋಕರಿಗಳ ಹಾವಳಿಗೆ ಕಡಿವಾಣ ಬಿದ್ದಿದೆ. ಕಾಯಿಪಲ್ಲೆ ಮಾರ್ಕೆಟನಲ್ಲಿಯೇ ನಮ್ಮ ಜನರಿಗೆ ಈ ಹಿಂದೆ ಗೌರವವಿರಲಿಲ್ಲ. ಇದೀಗ ಗೌರವ ಮರುಕಳಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಈ ಬಡಾವಣೆಯನ್ನು ಎ, ಬಿ ಮತ್ತು ಸಿ ವಲಯಗಳಾಗಿ ವಿಂಗಡಿಸಿ ಮೂರು ವಲಯಗಳಲ್ಲಿ ಉದ್ಯಾನವನ, ಉತ್ತಮ ರಸ್ತೆಗಳು, ಒಳಚರಂಡಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ನಾಗರೀಕರು ತಮ್ಮ ನಿಗದಿಪಡಿಸಿದ ನಿವೇಶನಗಳನ್ನು ಹೊರತುಪಡಿಸಿ ಅತೀಕ್ರಮಣ ಮಾಡಿ, ಕಟ್ಟಡ ನಿರ್ಮಿಸಬಾರದು ಎಂದರು.

ಮಹಾಪೌರ ಶ್ರೀದೇವಿ ಲೋಗಾಂವಿ, ಪಾಲಿಕೆ ಸದಸ್ಯರಾದ ಉಮೇಶ ವಂದಾಲ, ರಾಹುಲ ಜಾಧವ, ನಿವಾಸಿಗಳ ಸಂಘದ ಅಧ್ಯಕ್ಷ ಬಾಬು ಚವ್ಹಾಣ, ಉಪಾಧ್ಯಕ್ಷ ಗುರುಶಾಂತ ಕಾಪಸೆ, ಕಾರ್ಯದರ್ಶಿ ಶಿವು ಬಿರಾದಾರ, ಬಸವರಾಜ ಪಾರಶೆಟ್ಟಿ, ಹಣಮಂತ ಕುಚನೂರ, ಅಣ್ಣಸಾಬ ನಗಾರ್ಚಿ, ಪ್ರದೀಪ ಸೂರ್ಯವಂಶಿ, ರಘು ವಡ್ಡರ, ಸುಭಾಷ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು..

Leave a Comment