ಸಕರಾತ್ಮಕ ಚಿಂತನೆಯ ಪಯಣ ವಿದ್ಯಾರ್ಥಿಗಳಿಗಿರಲಿ

ದಾವಣಗೆರೆ, ಸೆ. 7 – ವಿದ್ಯಾರ್ಥಿಗಳು ಅಂಕಗಳಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಸುಭದ್ರ ದೇಶವನ್ನು ಕಟ್ಟಲು ಮುಂದಾಗಬೇಕೆಂದು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಯೋಜಿಸಲಾಗಿದ್ದ 2017-18ನೇ ಸಾಲಿನ ಎಸ್ಎಸ್ಎಲ್ ಸಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಜ್ಞಾನಕಾಶಿ ಪ್ರಶಸ್ತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಬಾರದು. ನಮ್ಮ ಭಾಷೆಯನ್ನು ಪ್ರೀತಿಸೋಣ. ಅನ್ಯಭಾಷೆಯನ್ನು ಗೌರವಿಸೋಣ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಲು ಗುರುಗಳ ಮತ್ತು ಪೋಷಕರ ಶ್ರಮ ಬಹಳಷ್ಟಿರುತ್ತದೆ. ಸಂಘ ಸಂಸ್ಥೆಗಳು ಸಾಕಷ್ಟು ಜವಾಬ್ದಾರಿಯುತ ಕೆಲಸ ಮಾಡುತ್ತಿವೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುತ್ತಿರುವುದು ಶ್ಲಾಘನೀಯ. ಪಠ್ಯದ ಕಲಿಕೆ ಎಲ್ಲರಿಗೂ ಸಿಗುತ್ತದೆ. ಆದರೆ ಪಠ್ಯಕ್ಕೆ ಮೀರಿದ ಕಲಿಕೆ ಎಲ್ಲರಿಗೂ ಅವಶ್ಯಕ. ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಕಾಲಹರಣ ಮಾಡದೆ ಸಕರಾತ್ಮಕ ಚಿಂತನೆಗಳಲ್ಲಿ ಪಯಣ ಮಾಡಬೇಕಾಗಿದೆ. ನಾಡು, ನುಡಿ, ಸಂಸ್ಕೃತಿಯನ್ನು ಕಟ್ಟಲು ಮುಂದಾಗಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ ಅದನ್ನು ಹೊರಹಾಕುವ ಕೆಲಸ ಮಾಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಮಾತನಾಡಿ, ಕನ್ನಡ ಭಾಷೆ ಬೇರೆ ಭಾಷೆ ಅಡಿಯಲ್ಲಿ ಸಿಲುಕಿ ನಶಿಸುತ್ತಿದೆ ಎಂಬ ಆತಂಕವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಗೆ ಯಾವ ಆತಂಕವೇ ಇಲ್ಲ, ವಿದ್ಯಾರ್ಥಿಗಳು ಜ್ಞಾನ, ತಂತ್ರಜ್ಞಾನವನ್ನು ಬೆಳೆಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆಬರಬೇಕು. ಇಂಗ್ಲೀಷ್ ವ್ಯಾಮೋಹವನ್ನು ಬಿಡಬೇಕು. ಮುಂದುವರೆದ ದೇಶಗಳಲ್ಲಿ ಇಂಗ್ಲಿಷ್ ಭಾಷೆಗೆ ಬೆಲೆಯೇ ಇಲ್ಲ, ಅವರಾಡುವ ಭಾಷೆಯಲ್ಲಿ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿದ್ದಾರೆ. ಹಾಗೆ ಕನ್ನಡಿಗರು ಕನ್ನಡ ಭಾಷೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಮುಂದುವರೆಯಬೇಕು. ಕನ್ನಡ ಶಾಲೆಗಳ ಉಳಿವಿಗೆ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಯೋಜನೆಗಳನ್ನು ಜಾರಿಗೆ ತಂದಿರುವುದು ಸಂತಸದ ವಿಷಯ. ಅನ್ಯ ಭಾಷೆಯ ವ್ಯಾಮೋಹವನ್ನು ತ್ಯಜಿಸಿ ಕನ್ನಡ ಭಾಷೆಯನ್ನು ಪ್ರೀತಿಸೋಣ ಎಂದು ಹೇಳಿದರು.
ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜ್ಞಾನಕಾಶಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಉಷಾಕುಮಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಜಿಲ್ಲಾ ಗೌರವಾಧ್ಯಕ್ಷ ವಾಸುದೇವರಾಯ್ಕರ್, ದೊಗ್ಗಳ್ಳಿ ಗೌಡ್ರು ಪುಟ್ಟರಾಜು,ಜಿಲ್ಲಾಧ್ಯಕ್ಷೆ ಬಸಮ್ಮ, ದಿಳ್ಯಪ್ಪ, ಮುರುಗೇಂದ್ರಗೌಡ್ರು ಮತ್ತಿತರರಿದ್ದರು.

Leave a Comment