ಸಂಸತ್ ಅಧಿವೇಶನದಲ್ಲಿ 38 ಮಸೂದೆಗಳ ಮಂಡನೆ: ಜೋಷಿ

ಹುಬ್ಬಳ್ಳಿ , ಜೂ 8 – ಇದೇ 17 ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ 38ಕ್ಕೂ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ವಿಸ್ತರಣೆ , ತ್ರಿವಳಿ ತಲಾಕ್ ಇತರೆ ಶಾಸಕಾಂಗ ಸಂಬಂಧಿತ ವಿಷಯಗಳ ಮಸೂದೆಗಳು ಇದರಲ್ಲಿ ಅಡಕವಾಗಿರಲಿವೆ ಎಂದು ಅವರು ಹೇಳಿದರು.

ಎಲ್ಲಾ ಮಸೂದೆಗಳ ಅಂಗೀಕಾರಕ್ಕೆ ವಿರೋಧ ಪಕ್ಷಗಳ ಸಹಕಾರ ಬಯಸುವುದಾಗಿ ಅವರು ಹೇಳಿದರು

ಈಗಾಗಲೇ ಯುಪಿಎ ಅಧ್ಯಕ್ಷೆ ಸೋನಿಯಗಾಂಧಿ ಸೇರಿದಂತೆ ಅನೇಕ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಸಂಸತ್ ಸುಗಮ ಕಲಾಪಕ್ಕೆ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ 3600 ಎಕರೆ ಭೂಮಿ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರ್ಧ ಬೆಲೆಗೆ ಭೂಮಿ ಮಾರಾಟ ಮಾಡುತ್ತಿರುವುದನ್ನು ನೋಡಿದರೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ, ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.

ಅಧಿಕಾರ ಹಿಡಿದಿರುವ ಎರಡೂ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ಕಚ್ಚಾಡುತ್ತಿರುವುದನ್ನು ನೋಡಿದರೆ ಇಲ್ಲಿ ಯಾವುದೇ ಸರ್ಕಾರ ಇಲ್ಲ ಎಂಬ ಭಾವನೆ ಮೂಡುತ್ತಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಅವರು ಆರೋಪಿಸಿದರು.

Leave a Comment