ಸಂಸತ್‌ನಲ್ಲಿ ಸಮರ ಸದನ ಮುಂದೂಡಿಕೆ

ನವದೆಹಲಿ, ಆ. ೧೦- ರಫಾಯಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ನಡೆದಿರುವ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಪ್ರಕರಣವನ್ನು ಸಂಸತ್ತಿನ ಜಂಟಿ ಸದನ ಸಮಿತಿ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಆಗ್ರಹಿಸಿ ಧರಣಿ ನಡೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನವರೆಗೂ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ ಸಭಾಪತಿ ಎಂ.ವೆಂಕಯ್ಯನಾಯ್ಡು ತ್ರಿವಳಿ ತಲಾಕ್ ಮಸೂದೆ ಮಂಡನೆ ವಿಷಯ ಕೈಗೆತ್ತಿಕೊಳ್ಳಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್‌ನ ಹಲವು ಸದಸ್ಯರು ಖಾಸಗಿ ವಿಧೇಯಕವನ್ನು ಕೈಗೆತ್ತಿಕೊಳ್ಳಬೇಕು. ರಫಾಯಲ್ ಖರೀದಿಯಲ್ಲಿ ನಡೆದಿರುವ ಹಗರಣವನ್ನು ಜಂಟಿ ಸದನ ಸಮಿತಿ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದ್ದರಿಂದ ಕೋಲಾಹಲದ ವಾತಾವರಣವುಂಟಾಗಿ ಕಲಾಪವನ್ನು ಮುಂದೂಡುವಂತಾಯಿತು.

ಮತ್ತೆ ಸದನ ಸಮಾವೇಶಗೊಂಡಾಗಲೇ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ತನಿಖೆಗೆ ಆಗ್ರಹಿಸಿದ್ದರಿಂದ ಕೋಲಾಹಲವುಂಟಾಗಿ ಕಲಾಪವನ್ನು ಮಧ್ಯಾಹ್ನದವರೆಗೂ ಮುಂದೂಡಲಾಯಿತು. ಇನ್ನು ಲೋಕಸಭೆಯಲ್ಲೂ ಕೂಡ ಪರಿಸ್ಥಿತಿ ವಿಭಿನ್ನವಾಗಿರಲಿಲ್ಲ.

ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಸದಸ್ಯರು ಪ್ರಶ್ನೋತ್ತರವನ್ನು ಕೈಬಿಟ್ಟು ರಫಾಯಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಆಗ ಆಡಳಿತಾರೂಢ ಎನ್‌ಡಿಎ ಮತ್ತು ಕಾಂಗ್ರೆಸ್, ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ನಡೆದು ಕಲಾಪವನ್ನು ಮಧ್ಯಾಹ್ನವರೆಗೂ ಮುಂದೂಡಲಾಯಿತು.

ಪ್ರತಿಭಟನೆ

ಸಂಸತ್‌ನ ಉಭಯ ಸದನಗಳನ್ನು ಮುಂದೂಡುತ್ತಿದ್ದಂತೆ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾಗಾಂಧಿ, ರಾಜ್ಯಸಭಯ ಪ್ರತಿಪಕ್ಷದ ನಾಯಕ ಗುಲಾಂನಬಿ ಆಜಾದ್, ಲೋಕಸಭೆಯಲ್ಲಿನ ಕಾಂಗ್ರೆಸ್‌ನ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಪ್ರತಿಭಟನೆ ನಡೆಸಿ ಯುದ್ಧ ವಿಮಾನ ಖರೀದಿ ಪ್ರಕರಣವನ್ನು ಸಂಸತ್ತಿನ ಜಂಟಿ ಸದನ ಸಮಿತಿ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಯುದ್ಧ ವಿಮಾನ ಖರೀದಿಯಲ್ಲಿ ಗೋಲ್‌ಮಾಲ್ ನಡೆಸಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಲ್ಲಿಯವರೆಗೂ ಸದನದ ಕಲಾಪವನ್ನು ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಒತ್ತಾಯಿಸಿದರು.

m

Leave a Comment