ಸಂಸತ್‌ಗೆ ಸಚಿವರ ಗೈರು ವಿವರ ಕೇಳಿದ ಮೋದಿ

ನವದೆಹಲಿ, ಜು. ೧೬- ಸಂಸತ್ತಿಗೆ ಗೈರು ಹಾಜರಾಗಿ ಸಂಸದೀಯ ಕರ್ತವ್ಯದಿಂದ ಜಾರಿಕೊಂಡವರ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಕೆಂಡಾಮಂಡಲವಾಗಿದ್ದು ಇಂದು ಗೈರು ಹಾಜರಾಗಿರುವ ಸಚಿವರುಗಳ ಪಟ್ಟಿಯನ್ನು ಸಂಜೆಯೊಳಗೆ ಸಲ್ಲಿಸುವಂತೆ ಸೂಚಿಸಿದ್ದಾರೆಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸುದ್ದಿಗಾರರಿಗೆ ತಿಳಿಸಿದರು.
ಸರದಿ ಪ್ರಕಾರ ಸಂಸದೀಯ ಕರ್ತವ್ಯಗಳನ್ನು ಮಾಡಬೇಕೆಂಬ ಸೂಚನೆಯಿದ್ದರೂ ಗೈರಾಗಿರುವವರು ಯಾರು ಎಂದು ಸಚಿವರುಗಳ ಹೆಸರನ್ನು ತಿಳಿಯ ಬಯಸಿದ ಮೋದಿ ಬಿಜೆಪಿಯ ಸಂಸದೀಯ ಪಕ್ಷದ ಸಾಪ್ತಾಹಿಕ ಸಭೆ ನಡೆಸುತ್ತಿದ್ದರು.
ರಾಜಕೀಯ ಪಂಥಿಯ ಹೊರಗೆ ಕೆಲಸ ಮಾಡುವಂತೆ ಪ್ರಧಾನಿ ಕಿವಿಮಾತು ಹೇಳಿದರೆಂದು ಸಭೆಯಲ್ಲಿದ್ದವರು ಹೇಳಿದ್ದಾರೆ.
ಜನತೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಸದರು ಅವರವರ ಕ್ಷೇತ್ರಗಳ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಹೇಳಿದ ಪ್ರಧಾನಿ ಜಲಕ್ಷಾಮದ ಬಗ್ಗೆ ಒತ್ತು ನೀಡಿ ಮಾತನಾಡಿದರೆನ್ನಲಾಗಿದೆ.
ಸಂಸದರು ತಮ್ಮ ಕ್ಷೇತ್ರದ ಸ್ಥಳೀಯ ಆಡಳಿತದ ಜತೆಗೂಡಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ಅಸಾಮಾನ್ಯ ಸಾಧನೆ ಮಾಡಬೇಕೆಂದೂ ಅವರು ಕರೆಯಿತ್ತರು.
ಕ್ಷಯ ಮತ್ತು ಕುಷ್ಠರೋಗದಂತಹ ರೋಗಗಳನ್ನು ಎದುರಿಸಲು ಸಂಸದರು ಅಭಿಯಾನದಂತೆ ಶ್ರಮಿಸಬೇಕು ಎಂದೂ ಅವರು ಕರೆಯಿತ್ತರು.

Leave a Comment