ಸಂಶೋಧನೆಗಳ ಫಲ ರೈತರಿಗೆ ಸಿಗುವಂತಾಗಬೇಕು : ಪ್ರಭು ಚೌಹಾಣ್

ಬೆಂಗಳೂರು,ಸೆ 05-  ಪಶು ಸಂಗೋಪನಾ ಇಲಾಖೆಯಲ್ಲಿ ಅತ್ಯುತ್ತಮ ತಳಿ ಸಂವರ್ಧನೆ ಕಾರ್ಯ ನಡೆಯುತ್ತಿದ್ದು, ಅದನ್ನು ಸೂಕ್ತ ರೀತಿಯಲ್ಲಿ ರೈತರಿಗೆ ತಲುಪಿಸುವುದು ಹಾಗೂ ಅತ್ಯುನ್ನತ ತರಬೇತಿ ವ್ಯವಸ್ಥೆ ಕಲ್ಪಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಪಶುಸಂಗೋಪನಾ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಇಲಾಖೆಯಡಿ ಬರುವ ವಿವಿಧ ಸಂಶೋಧನಾ ಮತ್ತು ತಳಿ ಸಂವರ್ಧನಾ ಕೇಂದ್ರಗಳಿಗೆ ದಿಢೀರ್ ಭೆಟಿ ನೀಡಿ, ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪರಿಶೀಲನೆ ಮಾಡಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಕೇಂದ್ರಗಳ ಕಾರ್ಯ ನಿರ್ವಹಣೆ ಉತ್ತಮವಾಗಿದೆ. ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಮುಖ್ಯಮಂತ್ರಿ ಅವರ ಅನುಮತಿ ಪಡೆದು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇಲಾಖೆಯಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ತಮ್ಮನ್ನು ಖಾಯಂ ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ ಸಚಿವರು, ಕೆಲಸದಲ್ಲಿ ಯಾವುದೇ ರೀತಿಯ ಕರ್ತವ್ಯ ಲೋಪ ಮತ್ತು ಗೈರು ಹಾಜರಿಯನ್ನು ಸಹಿಸುವುದಿಲ್ಲ. ನಮ್ಮ ಇಲಾಖೆ ರೈತಾಪಿ ವರ್ಗದವರಿಗೆ ಹತ್ತಿರವಿರುವುದರಿಂದ ಅವರಿಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಬೇಕು. ಹೈನುಗಾರಿಕೆ ಅಭಿವೃದ್ಧಿಯೊಂದಿಗೆ ಸಮಗ್ರ ಪಶುಪಾಲನೆಗೆ ಹೆಚ್ಚಿನ ಒತ್ತು ಕೊಟ್ಟು ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಇವುಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ತೇಜನ ನೀಡಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಪಶುಸಂಗೋಪನಾ ಇಲಾಖೆಯ ಹೆಸರಘಟ್ಟದ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಜಾನುವಾರು ಸಂವರ್ಧನಾ ಕೇಂದ್ರ, ರಾಜ್ಯ ಕುಕ್ಕುಟ ಕೇಂದ್ರ, ಹಂದಿ ತಳಿ ಸಂವರ್ಧನಾ ಕೇಂದ್ರ, ರಾಜ್ಯ ಜಾನುವಾರು ವೀರ್ಯ ಶೇಖರಣಾ ಕೇಂದ್ರ, ಮೊಲ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Leave a Comment