ಸಂವಿಧಾನ ಬದ್ಧತೆಗಾಗಿ ಕೆಲಸ: ಸ್ಪೀಕರ್

ಬೆಂಗಳೂರು, ಜು. ೧೨- ಸಂವಿಧಾನಕ್ಕೆ ಗೌರವ ಕೊಟ್ಟು, ಸಂವಿಧಾನದಡಿಯಲ್ಲಿ ಕೆಲಸ ಮಾಡುತ್ತೇನೆ. ಯಾರನ್ನೊ ಸಂತೋಷಪಡಿಸಲೋ, ಅಸಂತೋಷಪಡಿಸಲು ನಾನು ನೃತ್ಯ ಮಾಡಲು ನೃತ್ಯಗಾರ್ತಿ ಅಲ್ಲ ಎಂದು ಸಭಾಧ್ಯಕ್ಷ ರಮೇಶ್‌ಕುಮಾರ್ ಹೇಳಿದರು.
ವಿಧಾನಮಂ‌ಡಲದ ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂವಿಧಾನಬದ್ಧವಾಗಿ ಸಂವಿಧಾನದ ಪ್ರಕಾರ ನೇಮಕಗೊಂಡ ಪ್ರತಿನಿಧಿ. ಆದರೆ ಸಂವಿಧಾನದಿಂದ ವಿಮುಖನಾಗುವುದಿಲ್ಲ. ಸಂವಿಧಾನದ ಮೇಲೆ ಅತ್ಯಾಚಾರವನ್ನೂ ಮಾಡುವುದಿಲ್ಲ. ಸಂವಿಧಾನದಲ್ಲಿ ಹೇಳಿದ್ದನ್ನಷ್ಟೇ ಮಾಡುತ್ತೇನೆ ಎಂದರು.
ಅತೃಪ್ತ ಶಾಸಕರು ನಿನ್ನೆ ನನ್ನನ್ನು ಭೇಟಿ ಮಾಡಿ ಕ್ರಮಬದ್ಧವಾದ ರಾಜೀನಾಮೆ ಪತ್ರಗಳನ್ನು ನೀಡಿದ್ದಾರೆ. ಅವರಿಗೆ ಪ್ರತ್ಯೇಕವಾಗಿ ವಿಚಾರಣೆ ದಿನಾಂಕವನ್ನು ನಿಗದಿ ಮಾಡುತ್ತೇನೆ ಎಂದರು.
ಸಂವಿಧಾನಕ್ಕೆ ಗೌರವ ಕೊಟ್ಟು ಕೆಲಸ ಮಾಡುತ್ತೇನೆ. ಸಂವಿಧಾನವೇ ನನಗೆ ಎಲ್ಲವೂ ಎಂದು ಅವರು ಹೇಳಿದರು.
ನನ್ನ ತೇಜೋವಧೆ ಮಾಡುವವರಿಗೆ ಸಂತೋಷವಾಗುವುದಾದರೆ ಮಾಡಿಕೊಳ್ಳಲಿ ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಗಾಂಧಿಯನ್ನು ಕೊಂದ ದೇಶದಲ್ಲಿ ನಾನ್ಯಾವ ಲೆಕ್ಕ ಎಂದವರು ವಿಷಾಧದ ದಾಟಿಯಲ್ಲಿ ಹೇಳಿದರು.
ಮಹಾತ್ಮಗಾಂಧಿಯವರನ್ನು ಪಿಸ್ತೂಲಿನಲ್ಲಿ ಗುಂಡು ಹೊಡೆದು ಕೊಂದರು. ಗಾಂಧಿ ಸಾಯಿಸಲು ಗುಂಡು ಹೊಡೆಯಬೇಕಿತ್ತಾ? ದೊಣ್ಣೆಯಲ್ಲೇ ಎರಡೇಟು ಹಾಕಿದ್ದರೆ ಸಾಯುತ್ತಿದ್ದರು. ದೈಹಿಕವಾಗಿ ಗಾಂಧೀಜಿಯವರನ್ನು ಸಾಯಿಸಿದರೂ ಅವರು ನಮ್ಮ ಮಧ್ಯೆ ಇಂದಿಗೂ ಬದುಕಿಲ್ಲವೇ? ನಾವು ಗಾಂಧಿತತ್ವಗಳ ಪಾಲನೆ ಮಾಡುವವರು ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಬಾವುಕರಾಗಿ ಹೇಳಿದರು.

Leave a Comment