ಸಂವಿಧಾನ ತಿದ್ದುಪಡಿಗಾಗಿ ಆಗ್ರಹಿಸಿ ಕೊಡವರ ಪ್ರತಿಭಟನೆ

ಬೆಂಗಳೂರು, ಆ. ೯- ವಿಶ್ವ ಆದಿಮ ಸಂಜಾತ ಮೂಲ ನಿವಾಸಿಗಳ ಹಕ್ಕುಗಳ ದಿನಾಚರಣೆ ಪ್ರಯುಕ್ತ ಇಂದು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಕೊಡವರು ಸಾಂಪ್ರದಾಯಿಕ ಉಡುಗೆ ತೊಟ್ಟು ಕೊಡವ ಭೂಮಿ ಹಕ್ಕೊತ್ತಾಯ ಮಂಡಿಸಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ವಿನೂತನ ರೀತಿ ಪ್ರತಿಭಟನೆ ನಡೆಸಿದರು.
ಕೊಡವರು ಈ ನೆಲದ ಆದಿಮ ಸಂಜಾತ ಬುಡಕಟ್ಟು ಜನರೆಂಬುದಕ್ಕೆ ಸಾಕ್ಷಿ ಜಗತ್ತಿಗೆ ಬೆಳಕಾಗಿರುವ ಸೂರ್ಯನಷ್ಟೆ ಸತ್ಯ. ಅನ್ನದಾತೆಯಾಗಿರುವ ಕೊಡವರ ಕುಲತಿಳಕಳಾದ ಜಲಧಾತೆ (ಜಲದೇವಿ) ಕಾವೇರಿಯಷ್ಟೆ ನಿರ್ಮಲ ಮತ್ತು ನಮಗೆ ಆಶ್ರಯದಾತೆಯಾಗಿರುವ ಈ ಭೂದೇವಿಯಷ್ಟೆ ಪರಮ ಪವಿತ್ರ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕಳೆದ 62 ವರ್ಷಗಳಿಂದ ಜೀವನದಿ ಕಾವೇರಿಯ್ಲಿ ಅದೆಷ್ಟೋ ಪ್ರಮಾಣದ (ಭಾರಿ ಪ್ರಮಾಣದ) ನೀರು ಹರಿದುಹೋಗಿದೆ. ಕೊಡಗು ರಾಜ್ಯ ಕರ್ನಾಟಕಕ್ಕೆ ಸೇರಿದಂತಂದಿನಿಂದ ಇಲ್ಲಿಯವರೆಗೆ ಕೊಡವರ ಎಲ್ಲಾ ಹಕ್ಕುಗಳನ್ನು ಹಂತ ಹಂತವಾಗಿ ಕಸಿಯುತ್ತಾ ಅವರ ನೆಲದ ಎಲ್ಲಾ ಸಂಪನ್ಮೂಲಗಳನ್ನು ಬಸಿದು ಶೋಷಿಸುತ್ತಾ ಸೂರೆ ಮಾಡುತ್ತಾ ಬಂದಿರುವ ಕರ್ನಾಟಕಕ್ಕೆ ಸದಾಕಾಲ ಕೊಡಗು ಓರ್ವ ಕಪ್ಪ ಒಪ್ಪಿಸುವ ಸಾಮಂತನಂತೆಯು ಮತ್ತು ಕೊಡವರನ್ನು ಅವರ ಅಧೀನ ಪ್ರಜೆಗಳನ್ನಾಗಿಯೂ 2ನೇ ದರ್ಜೆಯ ನಾಗರಿಕರನ್ನಾಗಿಯೂ ಪರಿಗಣಿಸಿ ಅಪಾರ್ಥೈಡ್ ನೀತಿಯನ್ನು ಅನುಸರಿಸುತ್ತಾ ಬಂದಿದೆ ಎಂದು ದೂರಿದರು.
ಯುಗಯುಗಗಳಿಂದ ವೇದೋಪನಿಷತ್ ದಿನಗಳಿಂದಲೂ ಕೊಡವ ಬುಡಕಟ್ಟಿನ ತಾಯಿನೆಲ ಜನ್ಮಭೂಮಿ ಕೊಡಗು ಭರತ ವರ್ಷ ಮತ್ತು ಆರ್ಯವರ್ತಗಳ ಛಪ್ಪನ್ 56 ಜನಪದ ರಾಷ್ಟ್ರಗಳ ಪೈಕಿ, ಕ್ರೋಢಧೇಶವೆಂದು ಪ್ರಚಲಿತದಲ್ಲಿದ್ದು, ಮುಂದೆ ಸ್ವತಂತ್ರ ದೇಶ, ರಾಜಾಧಿಪತ್ಯ, ಬ್ರಿಟಿಷ್ ಇಂಡಿಯಾ ಪ್ರಾಂತ ಮತ್ತು ಸ್ವತಂತ್ರ ಭಾರತದ ಸಂವಿಧಾನದಡಿಯಲ್ಲಿ ಪ್ರತ್ಯೇಕ ಸಿ ರಾಜ್ಯವಾಗಿ ಮುಂದುವರಿದಿತ್ತೆಂಬುದು ಸರ್ವವಿಧಿತ ಎಂದರು.

Leave a Comment