ಸಂವಿಧಾನ ಜಾಗೃತಿ ನಡಿಗೆ ಕಾರ್ಯಕ್ರಮ

ಹನೂರು: ಜ.25- ಪಟ್ಟಣದಲ್ಲಿ ಸರ್ವ ಸಮುದಾಯ ಸೋದರತಾ ವೇದಿಕೆ ವತಿಯಿಂದ ಸಂವಿಧಾನ ಜಾಗೃತಿ ನಡಿಗೆ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ನಡೆಸಲಾಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶಾಲಾ ವಿದ್ಯಾರ್ಥಿಗಳು ಸರ್ವ ಸಮುದಾಯ ಸೋದರತಾ ವೇದಿಕೆಯ ಸದಸ್ಯರು ಪಾಲ್ಗೊಂಡು ನಂತರ ರಾಷ್ಟ್ರಗೀತೆಗೆ ಸೆಲ್ಯೂಟ್ ಮಾಡುವ ಮೂಲಕ ಸಂವಿಧಾನ ಜಾಗೃತಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂವಿಧಾನ ಪ್ರಸ್ತಾವನೆಯನ್ನು ಒಳಗೊಂಡ ಬೃಹತ್ ಚಿತ್ರವನ್ನು ಅಳವಡಿಸಿಕೊಂಡು ಜಾಗೃತಿ ಮೂಡಿಸಲಾಯಿತು. ಈ ವೇಳೆ ವಿದ್ಯಾರ್ಥಿಗಳು ಭಾರತದ ತ್ರಿವರ್ಣ ಧ್ವಜ ಹಾಗೂ ಡಾ.ಅಂಬೇಡ್ಕರ್‍ರವರ ಪ್ರಮುಖ ಹೇಳಿಕೆಗಳನ್ನು ಒಳಗೊಂಡ ಘೋಣೆಗಳ ನಾಮ ಫಲಕವನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಹೊರಟು ಅಂಬೇಡ್ಕರ್ ನಗರ ಹಾಗೂ ಇನ್ನಿತರೆ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ನಂತರ ಖಾಸಗಿ ಬಸ್ ನಿಲ್ದಾಣದ ಮೂಲಕ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಮಾಯಿಸಿದರು. ಪಟ್ಟಣದ ಅಂಬೇಡ್ಕರ್ ಬಡಾವಣೆಯ ಯುವಕರು ಒಂದೇ ರೀತಿಯ ಸಮ ವಸ್ತ್ರಗಳನ್ನು ಧರಿಸಿ ಶಿಸ್ತಿನಿಂದ ಮ್ಯಾರಥಾನ್ ಮೆರವಣಿಗೆಯಲ್ಲಿ ಸಾಗಿದರು.
ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಬೃಹತ್ ಡಾ.ಅಂಬೇಡ್ಕರ್ ಪ್ರತಿಮೆಗೆ ಕೊಳ್ಳೇಗಾಲ ತಹಶೀಲ್ದಾರ್ ಕೆ.ಕುನಾಲ್ ಮಾಲಾರ್ಪಣೆಯನ್ನು ಮಾಡಿ ಗೌರವ ಸಮರ್ಪಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ಅಗ್ನಿಶಾಮಕ ಶಾಮಕ ದಳದ ಅಧಿಕಾರಿ ಶೇಷ ಸರ್ವ ಸಮುದಾಯ ಸೋದರತಾ ವೇದಿಕೆಯ ಮುಖಂಡರುಗಳು, ಪಟ್ಟಣದ ಯುವಕರು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Comment