ಸಂವಿಧಾನ ಗೌರವಿಸಿ ಪ್ರತಿಭಟನಾಕಾರರಿಗೆ ಸೂಚನೆ

ಬೆಂಗಳೂರು, ಸೆ. ೧೦- ಶಾಸಕ ಡಿ.ಕೆ. ಶಿವಕುಮಾರ್ ಅವರ ಇಡಿ ಬಂಧನ ವಿರೋಧಿಸಿ ನಾಳೆ ಡಿಕೆಶಿ ಹಿತೈಷಿಗಳು ನಡೆಸುತ್ತಿರುವ ಪ್ರತಿಭಟನೆ ಸಾಂಕೇತಿಕವಾಗಿ ನಡೆಯಲಿ. ಎಲ್ಲರೂ ದೇಶದ ಸಂವಿಧಾನ ಗೌರವಿಸಬೇಕು, ಕಾನೂನು ಪಾಲನೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಯಾವುದೇ ಹೋರಾಟ ಭ್ರಷ್ಟಾಚಾರ, ಬೇನಾಮಿ ಆಸ್ತಿಯ ವಿರುದ್ಧ ಆಗಿರಬೇಕು. ಭ್ರಷ್ಟಾಚಾರ ರಹಿತ ಸಮಾಜ ಕಟ್ಟಬೇಕಿದೆ. ಸ್ವತಃ ಡಿ.ಕೆ.ಶಿವಕುಮಾರ್ ಅವರೇ ನಮಗೆ ಕಾನೂನಿನ ಮೇಲೆ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಹಾಗಾಗಿ ಕಾನೂನು ಎತ್ತಿ ಹಿಡಿಯುವ ಕೆಲಸ ಎಲ್ಲರಿಂದಲೂ ಆಗಬೇಕು ಎಂದು ನಗರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಜಾತಿ ಮೀರಿ ಭ್ರಷ್ಟಾಚಾರ ರಹಿತ ಸಮಾಜ ಕಟ್ಟಬೇಕು. ಎಲ್ಲರೂ ಒಂದಾಗಿ ನಡೆಯಬೇಕು. ಹಾಗಾಗಿ ಶಾಂತಿಯುತ ಪ್ರತಿಭಟನೆ ನಡೆಸಿ ಎಂದು ಅವರು ಕಾಂಗ್ರೆಸ್ಸಿಗರಿಗೆ ಮನವಿ ಮಾಡಿದರು.

ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ಅವರ ಭಾವನೆ ಅವರು ವ್ಯಕ್ತಪಡಿಸಲಿ. ಕಾನೂನಿನ ಪಾಲನೆ ಅತಿ ಮುಖ್ಯ ಎಂದು ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹತಾಶರಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರದಿಂದ ಒಂದು ಸಮುದಾಯವನ್ನು ತುಳಿಯುವ ಯತ್ನ ನಡೆದಿದೆ ಎಂಬ ಕುಮಾರಸ್ವಾಮಿಯವರ ಮಾತುಗಳು ಅವರ ಹತಾಶೆಯನ್ನು ತೋರಿಸುತ್ತದೆ. ಕುಮಾರಸ್ವಾಮಿ ಏಕೆ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಅವರನ್ನೇ ಕೇಳಿ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್‌ನಾರಾಯಣ ಹೇಳಿದರು.

ಸರ್ಕಾರದ ಯಾವುದೇ ಯೋಜನೆಗಳಲ್ಲಿ ಅವ್ಯವಹಾರವಾಗಿಲ್ಲ. ತಪ್ಪಾಗಿದ್ದರೆ ಸರಿಪಡಿಸುವುದು ಸರ್ಕಾರದ ಜವಾಬ್ದಾರಿ ಎಂದರು. ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ಪ್ರಯತ್ನದ ಪ್ರಶ್ನೆಯೇ ಇಲ್ಲ. ಜನ ಈ ಹಿಂದೆಯೇ ಬಿಬಿಎಂಪಿಯಲ್ಲಿ ನಮಗೆ ಬಹುಮತ ಕೊಟ್ಟಿದ್ದರು. ಆದರೆ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. ಈಗ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಇನ್ನಷ್ಟು ಬಲವಾಗಬೇಕಿದೆ. ಅದಕ್ಕೂ ನಾವು ಸಿದ್ದ. ಗೋಹತ್ಯೆ ನಿಷೇಧ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ ಇದೆ ಎಂದು ಅವರು ಹೇಳಿದರು.

Leave a Comment