ಸಂವಿಧಾನ ಓದು ಉಪನ್ಯಾಸ

ಧಾರವಾಡ : ಭಾರತದ ಸಂವಿಧಾನ ಕಥೆ, ಕಾದಂಬರಿ, ನಾಟಕ, ಸಿನಿಮಾ, ಕಾವ್ಯವಲ್ಲ. ಇದೊಂದು ಮಹಾಗ್ರಂಥ. ಕಾನೂನುಗಳ ತಾಯಿ. ಭಾರತವನ್ನು ಅರಿಯದೇ ಇದ್ದರೆ ಸಂವಿಧಾನ ಅರ್ಥ ಆಗುವುದಿಲ್ಲ. ದೇಶದ ಚರಿತ್ರೆಯ ಜತೆಗೆ ಭಾಷೆ, ಜನಾಂಗ, ಸಂಸ್ಕೃತಿ ಹಾಗೂ ಜನರ ಕುರಿತು ತಿಳಿವಳಿಕೆ ಇದ್ದಾಗ ಸಂವಿಧಾನ ಅರ್ಥ ಆಗಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಕಾನೂನು ಮಂಟಪ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮುದಾಯ ಕರ್ನಾಟಕ ಹಾಗೂ ಸಹಯಾನ ಕೆರೆಕೋಣ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ-ಶಿಕ್ಷಕರಿಗಾಗಿ ಆಯೋಜಿಸಿದ್ದ `ಸಂವಿಧಾನ ಓದು’ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಸಂವಿಧಾನ ಓದು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ  ಈಶಪ್ಪ ಕೆ. ಭೂತೆ, ಸಂವಿಧಾನ ಓದು ಪುಸ್ತಕ 90 ಸಾವಿರ ಪ್ರತಿಗಳು ಮಾರಾಟ ಆಗಿವೆ. ಜನರಿಂದ ಪುಸ್ತಕಕ್ಕೆ ಬೇಡಿಕೆ ಹೆಚ್ಚಿದೆ. ಸಂವಿಧಾನದ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ನಾಗಮೋಹನ್ ದಾಸ `ಸಂವಿಧಾನ ಓದು’ ಪುಸ್ತಕ ಬರೆದಿದ್ದಾರೆ ಎಂದರು.
ಸಂವಿಧಾನ ಭಾರತೀಯ ಧರ್ಮ ಗ್ರಂಥ. ನಾಗಮೋಹನದಾಸ ನಿವೃತ್ತಿ ನಂತರ ತಮ್ಮ ಜೀವನವನ್ನು  ತಮಗಾಗಿ ನಡೆಸದೆ ಸಂವಿಧಾನದ ಆಶಯಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕಾರ್ಯ ಮಾಡುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ, ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಂದು ಚಟುವಟಿಕೆ ಸಂವಿಧಾನದ ಚೌಕಟ್ಟು ಅವಲಂಬಿಸಿದೆ ಆದ್ದರಿಂದ ಪ್ರತಿಯೊಬ್ಬ ಭಾರತೀಯ ಪ್ರಜೆ ಸಂವಿಧಾನ ಓದು, ಅರಿತು ಅದರೆಂತೆ ನಡೆಯಬೇಕು, ಜಗತ್ತಿನ 199 ರಾಷ್ಟ್ರಗಳಲ್ಲಿ 190 ರಾಷ್ಟ್ರದಲ್ಲಿ ಸಂವಿಧಾನವಿದೆ. ನೆಮ್ಮದಿಯ ಬದುಕಿಗೆ ಪ್ರತಿ ರಾಷ್ಟ್ರಕ್ಕೂ  ಸಂವಿಧಾನ ಅಗತ್ಯ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಶೇ 20 ರಷ್ಟಿದ್ದ ಸಾಕ್ಷರತೆ ಈಗ ಶೇ 80 ಕ್ಕೆ ತಲುಪಿದೆ. 70 ರಷ್ಟು ಬಡತನವಿತ್ತು. ಈಗ ಶೇ 20 ಕ್ಕೆ ಇಳಿಮುಖವಾಗಿದೆ. ಹಿಂದೆ ಆಹಾರ ಧಾನ್ಯಗಳನ್ನು ಆಮದು ಮಾಡಲಾಗುತ್ತಿತ್ತು. ಈಗ ರಫ್ತು ಮಾಡಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರು ಪ್ರವೇಶ ಮಾಡಿದ್ದಾರೆ, ಇದೆಲ್ಲವೂ ಸಂವಿಧಾನದಿಂದಲೇ ಸಾಧ್ಯವಾಗಿದ್ದು ಎಂದರು.
ಅಖಿಲ ಭಾರತ ವಕೀಲರ ಒಕ್ಕೂಟದ ಸದಸ್ಯ ವೆಂಕಟೇಶ ಗೌಡ, ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಕಾರ್ಯದರ್ಶಿ ಆರ್. ಎಸ್. ಚಿನ್ನಣ್ಣವರ ಮಾತನಾಡಿದರು.
ಇದೇ ವೇಳೆ ಭಾರತ ಸಂವಿಧಾನದ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ  ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಅಧ್ಯಕ್ಷತೆ ವಹಿಸಿದ್ದರು. ಕೆ. ಎಚ್. ಪಾಟೀಲ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಮಂಟಪದ ಸಂಚಾಲಕರಾದ ಬಸವಪ್ರಭು ಹೊಸಕೇರಿ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ ವಂದಿಸಿದರು. ಶಿಕ್ಷಣ ಇಲಾಖೆ ಅಧಿಕಾರಿ ಬಿ.ಬಿ. ದುಬ್ಬನಮರಡಿ ಬಿ.ಇ.ಓ. ಶ್ರೀಮತಿ ವಿದ್ಯಾ ನಾಡಿಗೇರ, ಶ್ರೀ ಬಿ. ಎಂ. ಖಾಜಿ ಇದ್ದರು.
ಕಾರ್ಯಕ್ರಮದಲ್ಲಿ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ, ಸಹಕಾರ್ಯದರ್ಶಿ ಸದಾನಂದ ಶಿವಳ್ಳಿ ಹಾಗೂ ವಾಯ್.ಪಿ. ಮದ್ನೂರ, ಗುರು ಹಿರೇಮಠ ಸೇರಿದಂತೆ, ನ್ಯಾಯಾಧೀಶರು, ನ್ಯಾಯವಾದಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Comment