ಸಂವಿಧಾನವನ್ನು ಕಳೆದುಕೊಂಡರೆ ದೇಶದಲ್ಲಿ ಅಂತರ್ಯುದ್ಧ: ಎಸ್.ಆರ್‌.ಪಾಟೀಲ್

ಬೆಂಗಳೂರು ಮಾ.19 – ಭಾರತ ದೇಶ ಜಗತ್ತಿನ ಸೂಪರ್ ಪವರ್ ರಾಷ್ಟ್ರ ಆಗಲು ಸಂವಿಧಾನ ಹಾಗು ಸಂವಿಧಾನದ ಆಶಯಗಳನ್ನು ಉಳಿಸಬೇಕು, ಸಂವಿಧಾನ ನಾಶವಾದರೆ ದೇಶ ಛಿದ್ರವಾಗಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ವಿಧಾನ ಪರಿಷತ್ ನ ಬೆಳಗಿನ ಕಲಾಪದಲ್ಲಿ ಸಂವಿಧಾನದ ಮೇಲಿನ ಚರ್ಚೆಯ ಮೇಲೆ ಮಾತನಾಡಿದ ಎಸ್ ಆರ್ ಪಾಟೀಲ್, ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕು. ಇದನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ ಹೆಣ್ಣು ಮಕ್ಕಳು ಮತ್ತು ಮಕ್ಕಳು ಮಾರಾಟದ ಸರಕಾಗಿದ್ದಾರೆ. ಇಂತಹ ಪ್ರಕರಣಗಳಲ್ಲಿ ಎಫ್ ಐ ಆರ್ ದಾಖಲಿಸಿ ಚಾರ್ಜ್ ಶೀಟ್ ಹಾಕಬೇಕು. ದೇಶದಲ್ಲಿ ದಲಿತರ ಮೇಲೆ ಹಲ್ಲೆಯಾಗುತ್ತಿವೆ. ಇದರ ಬಗ್ಗೆ‌ ವರದಿ ಇದೆ , 77 ನಿಮಿಷಕ್ಕೆ ಒಬ್ಬ ಮಹಿಳೆ ಸಾಯುತ್ತಿದ್ದಾರೆ, ಪ್ರತಿ 6 ಗಂಟೆಗೆ ಓರ್ವ ವಿವಾಹಿತ ಮಹಿಳೆ ಸಾಯುತ್ತಿದ್ದಾಳೆ, 47 ನಿಮಿಷಕ್ಕೆ ಇಂದು ಅತ್ಯಾಚಾರ ಆಗುತ್ತಿದೆ ಇದನ್ನು ದಾಖಲೆ ಇಟ್ಟುಕೊಂಡು ಮಾತಾಡುತ್ತಿದ್ದೇನೆ ಎಂದರು.
ಪ್ರಜಾತಂತ್ರ ವ್ಯವಸ್ಥೆಗಳಿಗೂ ಧಕ್ಕೆ ಬರುತ್ತಿದೆ, ಕಾರ್ಯಾಂಗ, ಶಾಸಕಾಂಗದಿಂದ ನ್ಯಾಯಾಂಗವನ್ನು ಬೇರ್ಪಡಿಸಿದೆ. ಅದಕ್ಕೆ ಸ್ವಾಯತ್ತತೆ ಇದೆ. ಇದಕ್ಕೆ ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು. ಸುಪ್ರೀಂ ಕೋರ್ಟ್, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರ ಹುದ್ದೆಗಳು ಖಾಲಿ ಇವೆ. ಅದರ ಬಗ್ಗೆ ಗಮನ ಕೊಡಬೇಕು. ದೆಹಲಿಯಲ್ಲಿ ಗೋಲಿಮಾರೊ ಅನ್ನೊ ಪ್ರಕರಣ ಏನಾಯ್ತು ?. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಪ್ರೆಸ್ ಮೀಟ್ ಮಾಡಿದ್ದರು, ಇದು ಏನನ್ನು ತೋರಿಸುತ್ತದೆ ಎಂದು ಕೇಂದ್ರದ ವಿರುದ್ಧ ಬೊಟ್ಟು ಮಾಡಿದರು.
ಇಡಿ, ಐಟಿ , ಸಿಬಿಐ ಈ ಎಲ್ಲಾ ಸಂಸ್ಥೆಗಳು ಸ್ವತಂತ್ರ್ಯವಾಗಿ ಕೆಲಸ ಮಾಡಲು ಬಿಡಬೇಕು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ನಿವೃತ್ತಿ ಆದ ತಕ್ಷಣ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುತ್ತಾರೆ, ಇದನ್ನು ಗಮನಿಸಿದರೆ ಜನಸಾಮಾನ್ಯರಿಗೆ ಅನುಮಾನ ಬರುತ್ತದೆ. ಇದೇನಪ್ಪ ಒಳ ಒಪ್ಪಂದ ಏನಾದ್ರು ಇತ್ತಾ ಎಂದು ಸಂಶಯ ಪ್ರಶ್ನಿಸಿದರು.
ಇದಕ್ಕೆ‌ ಬಿಜೆಪಿ ಸದಸ್ಯ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.
ತಿಳಿದುಕೊಂಡವರು ಓದಿಕೊಂಡವರು ರಾಜ್ಯಸಭೆಗೆ ಬರುವುದು ತಪ್ಪಾ ಎಂದು ಕೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ದನಿಗೂಡಿಸಿದರು. ಈ ವೇಳೆ ಪ್ರತಿಪಕ್ಷ ಸದಸ್ಯರು ಕೂಡ ಬಿಜೆಪಿ ಸದಸ್ಯರ ವಿರುದ್ಧ ತಿರುಗಿಬಿದ್ದರು. ಹೀಗಾಗಿ ಕೆಲಕಾಲ ಸದನದಲ್ಲಿ ಗದಲ್ಲದ ವಾತಾವರಣ ಸೃಷ್ಟಿಯಾಯಿತು.
ನಂತರ ಮಾತು ಮುಂದುವರೆಸಿದ ಎಸ್.ಆರ್.ಪಾಟೀಲ್, ಕೋಮುವಾದಿಗಳು, ಮಾಫಿಯಾದಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಕೇವಲ ಅಭಿವೃದ್ಧಿ ಆದರೆ ಸಾಲದು. ಮಾನವೀಯತೆ ಬೇಕು. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸಲಿದೆ, ಸಂವಿಧಾನದ ಆಶಯಗಳನ್ನು ಉಳಿಸಿಕೊಂಡು ಹೋದರೆ ಅದರ ಉಪಯೋಗ ಮುಂದಿನ ಪೀಳಿಗೆಗೆ ಸಿಗಲಿದೆ ಎಂದರು.
ವಿವಿಧ ಧರ್ಮ,ಭಾಷೆ,ನಂಬಿಕೆ ಆಚಾರ,ವಿಚಾರ,ಪದ್ದತಿ,ಆಹಾರ ಪದ್ದತಿ ಜನರನ್ನು ಒಟ್ಟಿಗೆ ಮುನ್ನಡೆಸುವುದು ಸಂವಿಧಾನ. ಈ ಸಂವಿಧಾನ ಕಳೆದುಕೊಂಡರೆ ಅಂತರ್ ಯುದ್ದ ಶುರುವಾಗಲಿದೆ, ದೇಶ‌ ಛಿದ್ರವಾಗಲಿದೆ, ಅರಾಜಕತೆ, ಕೋಮುವಾದ ಸಿದ್ದಾಂತ ಆರಂಭಗೊಳ್ಳಲಿದೆ, ಜನಸಾಮಾನ್ಯರು ಹಕ್ಕು‌ಕಳೆದುಕೊಂಡು ಬದುಕಬೇಕಾಗಲಿದೆ,‌ ಮಹಿಳೆ, ಅಲ್ಪಸಂಖ್ಯಾತ, ಬಡವರು, ದಲಿತರು ದಬ್ಬಾಳಿಕೆಯಲ್ಲಿ ಬದುಕಬೇಕಾಗಲಿದೆ, ಸಂವಿಧಾನದ ರಕ್ಷಣೆ ಜೊತೆಗೆ ಸಂವಿಧಾನದ ಆಶಯಗಳನ್ನೂ
ರಕ್ಷಿಸಬೇಕು, ದೇಶ ಸೂಪರ್ ಪವರ್ ಆಗಲು ಸಂವಿಧಾನದ ರಕ್ಷಣೆ ಮಾಡಬೇಕು ಎಂದರು.

Leave a Comment