ಸಂಯಮದಿಂದ ಸಾರ್ವಜನಿಕರ ಕುಂದುಕೊರತೆ ಆಲಿಸಿ

ಕೊರಟಗೆರೆ, ಜ. ೧೧- ಸರ್ಕಾರಿ ನೌಕರರು ಇಲಾಖಾ ಕಾರ್ಯಸೂಚಿ ಸುತ್ತೋಲೆಗಳನ್ನು ಅನುಸರಿಸಿ ಕೆಲಸ ಮಾಡಬೇಕು ಎಂದು ತುಮಕೂರು ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಶಿವನಂಜಯ್ಯ ತಿಳಿಸಿದರು.

ಪಟ್ಟಣದ ನೌಕರರ ಭವನದಲ್ಲಿ ಕೊರಟಗೆರೆ ಸರ್ಕಾರಿ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೌಕರರು ಸಾರ್ವಜನಿಕರ ಕೆಲಸ ನಿರ್ವಹಿಸಲು ಕೆಸಿಎಸ್‍ಆರ್ ಮತ್ತು ಸಿಸಿಎ ನಿಯಮದ ಅಡಿಯಲ್ಲಿ ಮಾಡಬೇಕು. ಸಾರ್ವಜನಿಕರ ಕುಂದುಕೊರತೆ ಹಾಗೂ ಕೆಲಸಗಳನ್ನು ಸೌಜನ್ಯದಿಂದ ನಿಯಮ ಮೀರದಂತೆ ನಿರ್ವಹಿಸುವುದು ಸೂಕ್ತ ಎಂದರು.
ನೌಕರರ ಸಂಘದ ಅಧ್ಯಕ್ಷ ವಿ.ಕೆ. ವೀರಕ್ಯಾತರಾಯ ಮಾತನಾಡಿ, ಸಂಘವು 15 ವರ್ಷಗಳಿಂದ ಕ್ಯಾಲೆಂಡರ್ ಬಿಡುಗಡೆ,

ಪ್ರತಿಭಾ ಪುರಸ್ಕಾರ, ನೌಕರರಿಗೆ ಸೇವಾ ನಿಯಮದ ಪುಸ್ತಕ ವಿತರಣೆ ಹಾಗೂ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಹಬಾಗಿತ್ವವನ್ನು ರೂಡಿಸಿಕೊಂಡು ಸೇವೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ವಲಯಗಳಲ್ಲಿ ನೌಕರರ ಸಂಘದಿಂದ ಅಗತ್ಯವಾದ ಕೆಲಸಗಳನ್ನು ಹಾಗೂ ಸಹಕಾರಗಳನ್ನು ಮಾಡುವುದರೊಂದಿಗೆ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲವು ತಲೆದೋರಿದ್ದು ನೌಕರರು ಸಾರ್ವಜನಿಕರ ಮತ್ತು ರೈತ ಕೆಲಸಗಳನ್ನು ವೇಳೆ ಲೆಕ್ಕಿಸದೆ ಅವರಿಗೆ ಸ್ಪಂದಿಸಿ ಮಾಡಿದ್ದಲ್ಲಿ ಬರಗಾಲದಲ್ಲಿ ನಾವು ರೈತರ ಕಷ್ಟಕ್ಕೆ ಸ್ಪಂದಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ.ಮೋಹನ್‍ಕುಮಾರ್, ನಿವೃತ್ತ ಇಓ ಗೋಪಾಲ್, ಗೌರವಾಧ್ಯಕ್ಷ ಎಲ್.ಕಾಮಯ್ಯ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ. ಹನುಮಂತರಾಯಪ್ಪ, ಅಂಜಿನಪ್ಪ, ಈಶ್ವರ್, ಮಲ್ಲೇಶ್, ಪಿ.ಸಿ. ನಾರಾಯಣಪ್ಪ, ಚನ್ನರಾಜು, ಜಿ.ಪಂ. ಇಲಾಖೆಯ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Comment