ಸಂಬಂಧಪಡದ ಮೇಲ್ಮನೆ ಸದಸ್ಯರು ಮತದಾರರ ಪಟ್ಟಿಗೆ

ಬೆಂಗಳೂರು, ಜು. ೧- ಬಿಬಿಎಂಪಿಯಲ್ಲಿ ಕೊನೆಯ ವರ್ಷದಲ್ಲೂ ಅಧಿಕಾರ ಸೂತ್ರವನ್ನು ಹಿಡಿಯಲು ಪಾಲಿಕೆಗೆ ಸಂಬಂಧಪಡದ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಮೇಲ್ಮನೆ ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದಲೂ ಬಿಬಿಎಂಪಿಯಲ್ಲಿ ವಾಮ ಮಾರ್ಗದ ಮೂಲಕವೇ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿಯೂ ಅಕ್ರಮವಾಗಿ ಕಳ್ಳ ಮತದಾರರನ್ನು ಸೃಷ್ಟಿಸಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸಿದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಈ ಹಿಂದೆ ನಗರದ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆಗೊಳಿಸಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿದ ಮೇಲ್ಮನೆ ಸದಸ್ಯರ ವಿರುದ್ಧ ಚುನಾವಣಾ ಆಯೋಗ ಮತ್ತು ಸಭಾಪತಿಯವರಿಗೆ ದೂರು ಸಲ್ಲಿಸುತ್ತಿದ್ದಂತೆ ನಗರದ ವಿಳಾಸದಿಂದ ನಾಪತ್ತೆಯಾಗಿದ್ದರು ಎಂದು ಅವರು ಹೇಳಿದರು.
ಕೊನೆ ವರ್ಷದಲ್ಲೂ ಮೇಯರ್ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಲ್ಮನೆಯ ಘನತೆ, ಗೌರವವನ್ನು ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಬಿಬಿಎಂಪಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಬೇರೆ ಜಿಲ್ಲೆಗಳ ಮೇಲ್ಮನೆ ಸದ್ಯಸರನ್ನು ನಗರ ಮತದಾರರ ಪಟ್ಟಿಯಲ್ಲಿ ಸೇರಿಸಿದರೆ ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುವುದಲ್ಲದೆ ಅಂತಹ ಸದಸ್ಯರ ಆನರ್ಹತೆಗೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ೪ ವರ್ಷಗಳ ಹಿಂದೆ ಬಿಜೆಪಿ ೧೦೨ ಸದಸ್ಯರು ಆಯ್ಕೆಯಾಗಿದ್ದು, ಅಧಿಕಾರ ಸೂತ್ರ ಹಿಡಿಯಲು ಅವಕಾಶ ಮಾಡಿ ಕೊಡದಂತೆ ೭೬ ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ೧೪ ಸದಸ್ಯರಿದ್ದ ಜೆಡಿಎಸ್ ಒಂದುಗೂಡಿ ಅಧಿಕಾರವನ್ನು ಕಳ್ಳಮಾರ್ಗದಲ್ಲಿ ಪಡೆದಿರುವುದು ಅವರ ಅಧಿಕಾರದ ದೂರ ಆಸೆಗೆ ಕನ್ನಡಿ ಹಿಡಿದಂತೆ ಆಗಿದೆ ಎಂದು ಆರೋಪಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಮತದಾರರು ತಕ್ಕಪಾಠ ಕಲಿಸಿದ್ದರೂ ಯಾವುದೇ ಸ್ವಾಭಿಮಾನವಿಲ್ಲದೆ ಈಗಲೂ ಬಿಬಿಎಂಪಿಯಲ್ಲಿ ಅಧಿಕಾರದ ಗದ್ದುಗೆಗೆ ಅಂಟಿಕೊಂಡು ಕುಳಿತಿರುವುದು ನಾಚಿಕೆಗೇಡು ಎಂದು ಪದ್ಮನಾಭರೆಡ್ಡಿ ಆಪಾದಿಸಿದರು.
ಹೆಚ್‌ಡಿಕೆ, ಸಿದ್ದು ವಿರುದ್ಧ ರೆಡ್ಡಿ ಗರಂ
ಬಿಬಿಎಂಪಿಯಲ್ಲಿ ಕೊನೆಯ ವರ್ಷದಲ್ಲೂ ಅಧಿಕಾರ ಗದ್ದುಗೆ ಹಿಡಿಯಲು ಕಾಂಗ್ರೆಸ್‌ನ ಮೋಹನ್ ಕೊಂಡಜ್ಜಿ ಸೇರಿದಂತೆ ಇನ್ನೂ ಕೆಲವರನ್ನು ಬೆಂಗಳೂರು ನಗರದ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕುತಂತ್ರ ನಡೆಯುತ್ತಿದೆ. ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡೆಸುತ್ತಿರುವ ಕುತಂತ್ರ ಫಲ ಕೊಡುವುದಿಲ್ಲ.
ಸಾಮಾಜಿಕ ನ್ಯಾಯದ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ಹಿರಿಯ ರಾಜಕಾರಣಿಗೆ ಶೋಭೆ ತರುವಂತಿಲ್ಲ. ಸಂವಿಧಾನವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಿ ಪ್ರಜಾಪ್ರಭುತ್ವದ ಘನತೆ, ಗೌರವಗಳನ್ನು ಕಾಪಾಡಿಕೊಳ್ಳಬೇಕು.
ಇಲ್ಲದಿದ್ದಲ್ಲಿ ರಾಜಕೀಯ ಬಿಟ್ಟು ಅವರು ತೊಲಗಲಿ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಗೆ ಮತಹಾಕಿ ನಮ್ಮ ಹತ್ತಿರ ಕೆಲಸ ಮಾಡಿಕೊಡಿ ಎಂದು ಬರುತ್ತೀರಾ ಎಂಬ ದುರಹಂಕಾರದ ಮಾತುಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಲ್ಲಿಸಬೇಕು.
ಪದ್ಮನಾಭರೆಡ್ಡಿ
-ವಿರೋಧ ಪಕ್ಷದ ನಾಯಕರು ಬಿಬಿಎಂಪಿ

Leave a Comment