ಸಂಬಂಧಗಳ ತಾಕಲಾಟಕ್ಕೆ ಏನೆಂದು ಹೆಸರಿಡಲಿ

-ಚಿಕ್ಕನೆಟಕುಂಟೆ.ಜಿ ರಮೇಶ್
ಹೊಸ ಹೊಸ ಕನಸು ಕಟ್ಟಿಕೊಂಡು ಚಿತ್ರರಂಗದಲ್ಲಿ ತಳವೂರುವ ಹಂಬಲದೊಂದಿಗೆ ಅನೇಕ ಪ್ರತಿಭಾನ್ವಿತರು ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಅಂತವರ ಸಾಲಿಗೆ ಇದೀಗ “ಏನೆಂದು ಹೆಸರಡಲಿ”ತಂಡ ಕೂಡ ಸೇರ್ಪಡೆಯಾಗಿದೆ.

ರವಿ ಬಸಪ್ಪನದೊಡ್ಡಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಶ್ರೀನಿವಾಸ ಕುಲಕರ್ಣಿ ಬಂಡವಾಳ ಹಾಕಿದ್ದಾರೆ. ಕಿರುತೆರೆ ನಟಿ ಚಿತ್ಕಲಾ ಬಿರಾದಾರ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಚಿತ್ರ ಪೂರ್ಣಗೊಳ್ಳಲು ಬೆನ್ನೆಲುಬಾಗಿ ನಿಲ್ಲುವ ಜೊತೆಗೆ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಅರ್ಜುನ್ ಹಾಗು ರೋಜಾ ನಾಯಕ,ನಾಯಕಿಯರಾಗಿ ಚಿತ್ರರಂಗದಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.

ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ’ಯು’ ಪ್ರಮಾಣ ಪತ್ರ ನೀಡಿರುವುದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.

ಸೆನ್ಸಾರ್ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಹೇಳಿಕೊಳ್ಳಲು ಚಿತ್ರತಂಡ ಮಾಧ್ಯಮದ ಮುಂದೆ ಎದುರಾಗಿತ್ತು. ಮೊದಲು ಮಾತು ಆರಂಭಿಸಿದ ನಿರ್ಮಾಪಕ ಶ್ರೀನಿವಾಸ ಕುಲಕರ್ಣಿ,ಮೊದಲಿನಿಂದಲೂ ಸಿನಿಮಾ ಮಾಡುವ ಉದ್ದೇಶವಿತ್ತು.ಈಗ ಅದು ನೆರವೇರಿದೆ. ಒಳ್ಳೆಯ ಚಿತ್ರ ಮೂಡಿ ಬಂದಿದೆ. ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಮೊದಲ ನಿರ್ಮಾಣದ ಚಿತ್ರದಲ್ಲಿಯೇ ಉತ್ತಮ ಕಥೆ ಸಿಕ್ಕಿದೆ. ಜೊತೆಗೆ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಾಹಿತಿ ನೀಡಿದರು.

ಪತಿಯ ಮಾತಿಗೆ ಧ್ವನಿಗೂಡಿಸಿದ ಶೃತಿ ಕುಲಕರ್ಣಿ, ’ಏನೆಂದು ಹೆಸರಿಡಲಿ’ ನಾಯಕಿ ಪ್ರದಾನ ಚಿತ್ರ. ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.

ಚಿತ್ಕಲಾ ಬಿರಾದಾರ್,ಚಿತ್ರದಲ್ಲಿ ತಾಯಿ ಪಾತ್ರ ನಿರ್ವಹಿಸುತ್ತಿದ್ದೇನೆ. ಚಿತ್ರದ ಹೆಸರು ಕೇಳಿ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಚಿತ್ರ ನೋಡಿದ ಬಳಿಕ ಉದ್ಘಾರ ತೆಗೆಯುತ್ತಾರೆ. ಅಷ್ಟರ ಮಟ್ಟಿಗೆ ಚಿತ್ರ ಮೂಡಿ ಬಂದಿದೆ. ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ಭರವಸೆಯ ಮಾತನಾಡಿದರು.

ನಿರ್ದೇಶಕ ರವಿ ಬಸಪ್ಪನದೊಡ್ಡಿ,ಚಿತ್ರಕ್ಕೆ ’ಯು’ ಪ್ರಮಾಣ ಪತ್ರ ಸಿಕ್ಕಿದೆ. ಮುಂದಿನ ತಿಂಗಳ ೧೭ ರಂದು ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದ್ದು ಇದು ಸಹಜವಾಗಿಯೇ ಆತಂಕವನ್ನು ಹೆಚ್ಚು ಮಾಡಿದೆ. ಸಂಬಂಧಗಳ ತಾಕಲಾಟವಿದೆ. ಮೂರು ಪಾತ್ರಗಳ ಸುತ್ತ ಕಥೆ ಸಾಗಲಿದೆ. ಬದಲಾದ ಬದುಕು ಮತ್ತು ಚೌಕಟ್ಟಿನ ಬದುಕು ಹೇಗಿರುತ್ತದೆ ಎನ್ನುವುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಆದರೆ ಚಿತ್ರದಲ್ಲಿ ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ಹೇಳಲು ಹೋಗಿಲ್ಲ.

ಹಾಡುಗಳ ಮೂಲಕವೇ ಕಥೆ ಸಾಗಲಿದೆ. ದೊಡ್ಡರಂಗೇಗೌಡ, ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಗೀತರಚನೆ ಮಾಡಿದ್ದು ರವೀಂದ್ರನಾಥ್ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರದ ಗೀತೆಗಳೂ ಮಾಟೆಂಜ್ ರೀತಿಯಲ್ಲಿ ಮೂಡಿ ಬಂದಿವೆ. ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು. ನಾಯಕ ಅರ್ಜುನ್,ಮೊದಲ ಚಿತ್ರ, ಪ್ರೇಮಕಥೆಯ ಚಿತ್ರ. ಮೊದಲರ್ದ ಏನೂ ಕಷ್ಟವಾಗಲಿಲ್ಲ ಆರಾಮವಾಗಿ ನಟಿಸಿದೆ.

ದ್ವಿತೀಯಾರ್ಧದಲ್ಲಿ ಪಾತ್ರ ಸವಾಲಿನಿಂದಕೂಡಿದೆ. ಚಿತ್ರಕ್ಕಾಗಿ ಒಂದು ವರ್ಷದಿಂದ ಬೇರೆ ಯಾವುದೇ ಚಿತ್ರೀಕರಣದಲ್ಲಿ ಭಾಗಿಯಾಗಿರಲಿಲ್ಲ.ಒಳ್ಳೆಯ ಚಿತ್ರವಾಗಿ ಹೊರಹೊಮ್ಮಿದೆ ಎಂದರೆ ನಾಯಕಿ ರೋಜಾ, ಇದು ನನ್ನ ಮೂರನೇ ಚಿತ್ರ. ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.ಒಳ್ಳೆಯ ಹೆಸರು ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯ ಕಲಾವಿದೆ ಸುನೇತ್ರಾ ಪಂಡಿತ್,ಕನ್ನಡ ಮತ್ತು ಇಂಗ್ಲೀಶ್ ಸೇರಿಸಿ ಸಂಭಾಷಣೆ ಹೇಳುವ ಪಾತ್ರ. ಮನರಂಜನೆ ನೀಡುವುದು ನಮ್ಮ ಉದ್ದೇಶ. ಪಾತ್ರದ ಮೂಲಕ ನಗಿಸುವ ಪ್ರಯತ್ನ ಮಾಡಿದ್ದೇನೆ. ಚಿತ್ರತಂಡಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಕೇಳಿಕೊಂಡರು.

Leave a Comment