ಸಂಪೂರ್ಣ ಸಾಲ ಮನ್ನಾಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ

ಹೊಸಪೇಟೆ.ಜು.11 ಎಲ್ಲಾ ಬ್ಯಾಂಕುಗಳಲ್ಲಿರುವ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕ ಒತ್ತಾಯಿಸಿದೆ.

ಈ ಕುರಿತು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಪದಾಧಿಕಾರಿಗಳು, ರಾಜ್ಯದಲ್ಲಿ 65 ಲಕ್ಷ ರೈತರು 1.20 ಲಕ್ಷ ಕೋಟಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದಾರೆ. ಆದರೆ ರಾಜ್ಯ ಸರ್ಕಾರವು ಕೇವಲ 36 ಸಾವಿರ ಕೋಟಿ ಸುಸ್ತಿ ಸಾಲ ಮನ್ನಾ ಮಾಡಿದೆ. ಇದರಿಂದ ಕೇವಲ 20 ಲಕ್ಷ ರೈತರಿಗೆ ಮಾತ್ರ ಅನುಕೂಲವಾಗಲಿದೆ. ಉಳಿದ 45 ಲಕ್ಷ ರೈತರು ರಾಜ್ಯ ಸರ್ಕಾರದ ಸಾಲ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರೈತರು ಪಡೆದಿರುವ ವಿವಿಧ ಬ್ಯಾಂಕ್ ಗಳಲ್ಲಿನ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ ಸ್ಥಳೀಯ ಶಾಸಕರ ಅನುದಾನವನ್ನು ಕ್ಷೇತ್ರದ ಏತ ನೀರಾವರಿ ಯೋಜನೆ ಜಾರಿಗೆ ಮಂಜೂರು ಮಾಡುವಂತೆ ಹಾಗೂ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸುವಂತೆ ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅಧ್ಯಕ್ಷ ಎಂ.ಜಡಿಯಪ್ಪ.ಉಪಾಧ್ಯಕ್ಷ ಕೆ.ಮಲ್ಲಿಕಾರ್ಜನ, ಕಾರ್ಯದರ್ಶಿ ಜಿ.ವಿಶ್ವನಾಥ, ರುದ್ರೇಶ್, ಜಿ.ಖಾಜಾ ಹುಸೇನ್ ನಿಯಾಜಿ, ಸಣ್ಣ ಮಾರೆಪ್ಪ, ಹನುಮಂತಪ್ಪ, ಹೆಚ್.ಎಸ್.ರೇವಣಸಿದ್ದಪ್ಪ, ಜಯಪ್ಪ ಸೇರಿದಂತೆ ರೈತರು ಹಾಜರಿದ್ದರು.

Leave a Comment