ಸಂಪೂರ್ಣ ಲಾಕ್ ಡೌನ್ :ಜನ ಸಂಚಾರ ವಿರಳ

 

ಕಲಬುರಗಿ,ಮೇ.24-ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಭಾನುವಾರದ ಸಂಪೂರ್ಣ ಲಾಕ್ ಡೌನ್ ಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಜನ ಮತ್ತು ವಾಹನ ಸಂಚಾರ ವಿರಳವಾಗಿತ್ತು. ಜನರ ಓಡಾಟ ಮತ್ತು ವಾಹನ ಸಂಚಾರವಿಲ್ಲದೆ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ನಗರದ ಸುಪರ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ ಮತ್ತು ರಾಮ ಮಂದಿರ ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರ ಅಷ್ಟಾಗಿ ಕಂಡುಬರಲಿಲ್ಲ. ಅಲ್ಲಲ್ಲಿ ಕೆಲ ವಾಹನಗಳ ಓಡಾಟ ಹೊರತುಪಡಿಸಿದರೆ ಉಳಿದಂತೆ ಎಲ್ಲೆಡೆ ಬಂದ್ ವಾತಾವರಣವಿತ್ತು.

ನಗರದ ಸುಪರ್ ಮಾರ್ಕೆಟ್ ನಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಜನರ ಓಡಾಟವಿಲ್ಲದೆ ರಸ್ತೆಗಳು ಬಣಗುಡುತ್ತಲಿದ್ದವು. ಭಾನುವಾರದ ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಬಸ್ ಸಂಚಾರ ಮತ್ತು ಆಟೋ ಸಂಚಾರ ನಿರ್ಬಂಧಿಸಲಾಗಿತ್ತು. ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಔಷಧಿ ಅಂಗಡಿ, ಆಸ್ಪತ್ರೆ, ಕಿರಾಣಿ ಅಂಗಡಿ ತೆರೆದಿದ್ದವು.

ಜನರ ಅನಗತ್ಯ ಓಡಾಟ ತಡೆಗೆ ನಗರದಾದ್ಯಂತ ಪೊಲೀಸ್ ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವು ಕಡೆ ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು. ಇನ್ನೂ ಕೆಲವು ಕಡೆ ಅನಗತ್ಯವಾಗಿ ಓಡಾಡದಂತೆ ಎಚ್ಚರಿಕೆ ನೀಡಿ ಮನೆಗೆ ತೆರಳುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಯಿತು. ಒಟ್ಟಾರೆ ಭಾನುವಾರದ ಸಂಪೂರ್ಣ ಲಾಕ್ ಡೌನ್ ಗೆ ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

Share

Leave a Comment