ಸಂಪುಟ ವಿಸ್ತರಣೆ ವಿಳಂಬ ಸಚಿವಾಕಾಂಕ್ಷಿಗಳಲ್ಲಿ ತಳಮಳ

ಬೆಂಗಳೂರು, ಜ. ೨೦- ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡುವೆ ಮಾತುಕತೆ ಸ್ಪಷ್ಟಸ್ವರೂಪ ತಿಳಿಯದೆ ನಡೆದಿರುವ ಬಗ್ಗೆ ಸಚಿವ ಆಕಾಂಕ್ಷಿ ಶಾಸಕ ತಳಮಳಗೊಳ್ಳುವಂತಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎರಡು ದಿನಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿರುವ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ, ಚರ್ಚೆಗಳು ನಡೆದಿರುವುದೇ ಅನುಮಾನ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿರುವುದು ಸಚಿವಾಂಕ್ಷಿ ಶಾಸಕರನ್ನು ಕಂಗೆಡಿಸಿದೆ. ಸದ್ಯಕ್ಕೆ ಸಂಪುಟ ವಿಸ್ತರಣೆಯಾಗುತ್ತದೋ? ಇಲ್ಲವೋ? ಎಂಬ ತಳಮಳ ಕಾಡುತ್ತಿದ್ದು, ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗಬಹುದೇ ಎಂಬ ತೊಳಲಾಟದಲ್ಲಿ ಸಚಿವಾಂಕ್ಷಿ ಶಾಸಕರು ಸಿಲುಕಿದ್ದಾರೆ.
ದಾವೋಸ್ ಪ್ರವಾಸದಿಂದ ಹಿಂತಿರುಗಿ ಬಂದ ನಂತರ ಎರಡು ದಿನಗಳಲ್ಲೇ ಸಂಪುಟ ವಿಸ್ತರಿಸುತ್ತೇನೆ. ಅಮಿತ್ ಶಾ ರವರಿಂದ ಸಂಪುಟ ವಿಸ್ತರಣೆಗೆ ಸೂಕ್ತ ಸ್ಪಂದನೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ದಾವೋಸ್ ಪ್ರವಾಸಕ್ಕೆ ತೆರಳುವ ಮುನ್ನ ಹೇಳಿ ಸಚಿವಾಂಕ್ಷಿ ಶಾಸಕರಲ್ಲಿ ಆಸೆ ಹುಟ್ಟುಹಾಕಿದ್ದಾರೆ.
ನಡ್ಡಾ ಜೊತೆ ಚರ್ಚೆ ನಂತರವೇ ಮುಹೂರ್ತ:
ಮುಖ್ಯಮಂತ್ರಿ ಯಡಿಯೂರಪ್ಪ ಅಮಿತ್ ಶಾರವರ ಜೊತೆ ಚರ್ಚೆ ನಡೆಸಿದ್ದರೂ, ಈಗ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಪದ ಗ್ರಹಣ ಮಾಡಿರುವುದರಿಂದ, ಮುಖ್ಯಮಂತ್ರಿ ಯಡಿಯೂರಪ್ಪ ವಿದೇಶ ಪ್ರವಾಸದಿಂದ ವಾಪಾಸ್ ಆದ ಬಳಿಕ ನೂತನ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲೇಬೇಕು. ಹಾಗಾಗಿ ಸಂಪುಟ ವಿಸ್ತರಣೆ ಮತ್ತಷ್ಟು ತಡವಾದರೂ ಅಚ್ಚರಿ ಪಡಬೇಕಿಲ್ಲ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೋ, ಯಾರಿಗೆ ಯಾವ ಖಾತೆ ನೀಡಬೇಕೋ? ಅರ್ಹ ಶಾಸಕರನ್ನೆಲ್ಲಾ ಸಂಪುಟಕ್ಕೆ ತೆಗೆದುಕೊಳ್ಳಬೇಕೋ? ಹಿರಿಯ ಶಾಸಕರಲ್ಲಿ ಯಾರಿಗೆ ಸಚಿವ ಪಟ್ಟಿ ನೀಡಬೇಕೋ? ಎಂದೆಲ್ಲಾ ವಿಚಾರಗಳು ಇನ್ನೂ ಇತ್ಯರ್ಥ ಆಗಿಲ್ಲ. ಹಾಗಾಗಿ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಯಡಿಯೂರಪ್ಪ ವಿದೇಶ ಪ್ರವಾಸದಿಂದ ಆದ ತಕ್ಷಣವೇ ನಡೆಯುವುದು ಅನುಮಾನ. ಇವೆಲ್ಲಾ ಸಚಿವಾಂಕ್ಷಿ ಶಾಸಕರಲ್ಲಿ ಚಿಂತೆ ತಂದಿದೆ. ಯಾವಾಗ ಸಂಪುಟ ವಿಸ್ತರಣೆಯಾಗುತ್ತದೆ. ಯಾವಾಗ ಸಚಿವರಾಗುತ್ತೇವೆಯೋ ಎಂದು ಮತ್ತಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪರವರು ದಾವೋಸ್ ಪ್ರವಾಸದಿಂದ ವಾಪಾಸ್ ಆಗಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರ ಜೊತೆ ಚರ್ಚಿಸಿದ ನಂತರವೇ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟತೆ ಸಿಗಲಿದೆ. ಅಲ್ಲಿಯವರೆಗೂ ಸಂಪುಟ ವಿಸ್ತರಣೆ ಬಗ್ಗೆ ವದಂತಿಗಳು, ಅಂತೆ-ಕಂತೆಗಳ ಕಾರು-ಬಾರು ಮುಂದುವರಿಯಲಿದೆ.

Leave a Comment