ಸಂಪುಟ ವಿಸ್ತರಣೆ ಮೂಗಿಗೆ ತುಪ್ಪ ಬೀಸೋ ದೊಣ್ಣೆಯಿಂದ ಪಾರಾಗಲು ಮುಹೂರ್ತ ನಿಗಧಿ

ಬೆಂಗಳೂರು, ಡಿ. ೬- ಚಳಿಗಾಲದ ವಿಧಾನಸಭಾ ಅಧಿವೇಶನ ಮುಗಿಯುತ್ತಿದ್ದಂತೆಯೇ ಈ ತಿಂಗಳ 22 ರಂದು ಸಂಪುಟ ವಿಸ್ತರಣೆ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದರೂ ಇದು ಮೂಗಿಗೆ ತುಪ್ಪ ಸವರುವ ಜಾಣತನ ಎಂಬುದು ಸಚಿವಾಕಾಂಕ್ಷಿಗಳ ಮನಸ್ಥಿತಿಯಾಗಿದೆ.
ಈ ತಿಂಗಳ 10 ರಿಂದ ಆರಂಭವಾಗುವ ಅಧಿವೇಶನದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವ ತಂತ್ರಗಾರಿಕೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯೇ ಹೊರತು ಸಂಪುಟ ವಿಸ್ತರಿಸಬೇಕೆಂಬ ಉಮೇದಿ ಕಾಂಗ್ರೆಸ್ ನಾಯಕರುಗಳಿಗೆ ಇದ್ದಂತಿಲ್ಲ ಎಂದು ಸಚಿವಾಕಾಂಕ್ಷಿ ಶಾಸಕರೊಬ್ಬರು `ಸಂಜೆವಾಣಿ’ಗೆ ತಿಳಿಸಿದ್ದಾರೆ.
ಪ್ರತಿಯೊಂದು ವಿಚಾರಗಳಿಗೂ ಶಾಸ್ತ್ರ ಕೇಳಿ, ವಾಸ್ತು ನೋಡಿ, ರಾಹುಕಾಲ, ಗುಳಿಕಾಲ ಗುಣಿಸಿ ಲೆಕ್ಕಾಚಾರ ಮಾಡುವ ಜೆಡಿಎಸ್‌ನ ಹಿರಿಯ ನಾಯಕರು ಧರ್ನುಮಾಸದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾರರು ಎಂಬುದು ಸಚಿವಾಕಾಂಕ್ಷಿ ಶಾಸಕರ ಅಭಿಪ್ರಾಯವಾಗಿದೆ.
ಸಂಪುಟ ವಿಸ್ತರಣೆಯನ್ನು ಧರ್ನುಮಾಸದ ನೆಪ ಹೇಳಿ ಮುಂದಕ್ಕೆ ಹಾಕಲೆಂದೇ 22ರ ಮುಹೂರ್ತ ನಿಗದಿ ಮಾಡಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಶಾಸಕರ ಅಸಮಾಧಾನ ಸ್ಫೋಟವಾಗದಂತೆ ತಡೆಯಲು ಸಮನ್ವಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಅಷ್ಟೆ.
ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವುದು ನಿಶ್ಚಿತ ಎಂದು ಬೆಂಗಳೂರಿನ ಹಿರಿಯ ಶಾಸಕರೊಬ್ಬರು ತಮ್ಮನ್ನು ಸಂಪರ್ಕಿಸಿದ `ಸಂಜೆವಾಣಿ’ಗೆ ತಿಳಿಸಿದರು.
ಶಾಸಕಾಂಗ ಪಕ್ಷ ಸಭೆ ರದ್ದು ಅಸಮಾಧಾನ
ಮುಖ್ಯಮಂತ್ರಿ ಕುಮಾರಸ್ವಾಮಿ ಪಾಲ್ಗೊಳ್ಳಬೇಕಿದ್ದ ನಾಳಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ದಿಢೀರ್‌ ಎಂದು ಮುಂದೂಡಿರುವುದು ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ಅಧಿವೇಶನಕ್ಕೂ ಮುನ್ನ ನಿಗದಿಯಾಗಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲೇ ನಡೆಸಲು ನಿರ್ಧರಿಸಿ, ನಾಳೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಮುಂದೂಡಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಈ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ, ಅವರಿಗೆ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಬಹುದು ಎಂದು ಕಾದಿದ್ದ ಕಾಂಗ್ರೆಸ್ ಶಾಸಕರಿಗೆ ಇದರಿಂದ ನಿರಾಸೆಯಾಗಿದ್ದು, ಕಾಂಗ್ರೆಸ್ ಶಾಸಕಾಂಗ ಸಭೆ ಮುಂದೂಡಿದ ನಾಯಕರ ತೀರ್ಮಾನದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದರೆ ಸಮಯಾಭಾವದಿಂದ ಮಾತನಾಡಲು ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲೇ ಸಭೆ ಆಗಿದ್ದರೆ ನೋವು, ದುಗುಡ, ದುಮ್ಮಾನಗಳನ್ನು ಹೇಳಿಕೊಳ್ಳಲು ಅವಕಾಶವಾಗುತ್ತಿತ್ತು ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ.

Leave a Comment