ಸಂಪುಟ ವಿಸ್ತರಣೆ ಮತ್ತೆ ವಿಳಂಬ : ಕಾಂಗ್ರೆಸ್‌ ನಾಯಕರಿಗೆ ಶಾಸಕರ ಬಂಡಾಯದ ಭೀತಿ, ಶಮನಕ್ಕೆ ತೇಪೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ. ೧೪- ಗಣೇಶಚತುರ್ಥಿಯ ನಂತರ ಸಂಪುಟ ವಿಸ್ತರಣೆಯಾಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸಚಿವಕಾಂಕ್ಷಿ ಶಾಸಕರಿಗೆ ಮತ್ತೆ ನಿರಾಸೆ ಕಾದಿದ್ದು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ತಡವಾಗುವುದು ನಿಶ್ಚಿತ.

ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಭಿನ್ನಾಭಿಪ್ರಾಯಗಳು ಸ್ಪೋಟಗೊಂಡಿರುವುದರಿಂದ ಸಚಿವ ಸಂಪುಟ ವಿಸ್ತರಣೆಯಂತಹ ದುಸ್ಸಾಹ ಬೇಡ. ಈಗ ಸಂಪುಟ ವಿಸ್ತರಣೆಯಾದರೆ ಸಚಿವ ಸ್ಥಾನ ಸಿಗದ ಶಾಸಕರ ಅತೃಪ್ತಿ, ಅಸಮಾಧಾನಗಳು ಉಲ್ಬಣಗೊಂಡು ಅದು ಸಮ್ಮಿಶ್ರ ಸರ್ಕಾರವನ್ನೇ ಅಪೋಷಣ ತೆಗೆದುಕೊಳ್ಳಬಹುದು ಹಾಗಾಗಿ ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಎಂಬುದು ಕಾಂಗ್ರೆಸ್ ವರಿಷ್ಠರ ನಿಲುವಾಗಿದೆ.

ಕೆಲ ದಿನಗಳ ಹಿಂದೆ ನಡೆದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಗಣೇಶ ಹಬ್ಬದ ನಂತರ ಅಂದರೆ ಈ ತಿಂಗಳ 16ರ ಬಳಿಕ ಸಂಪುಟ ವಿಸ್ತರಣೆ ನಡೆಸುವ ಚರ್ಚೆಗಳು ನಡೆದಿತ್ತು.

ಗಣೇಶ ಹಬ್ಬದ ನಂತರ ಸಂಪುಟ ವಿಸ್ತರಣೆ ನಿಶ್ಚಿತ ಎಂಬ ಮಾತುಗಳು ಆಗ ಕೇಳಿ ಬಂದಿದ್ದವು. ಆದರೆ, ಈಗ ಕಾಂಗ್ರೆಸ್ ಪಕ್ಷ ಸಂಪುಟ ವಿಸ್ತರಣೆಗೆ ಕೈಹಾಕುವ ಸ್ಥಿತಿಯಲ್ಲಿ ಇಲ್ಲ.

ಆಂತರಿಕ ಬೇಗುದಿ ಕಾಂಗ್ರೆಸ್ ಪಕ್ಷದಲ್ಲಿ ಬೆಂಕಿ ಕೆಂಡದಂತೆ ನಿಗಿನಿಗಿ ಹೊಳೆಯುತ್ತಿದೆ. ಯಾವಾಗ ಏನಾಗುತ್ತದೋ ಹೇಳಲು ಬಾರದ ಸ್ಥಿತಿ ಇದೆ. ಈ ಆಂತರಿಕ ಬೇಗುದಿ ಸಮ್ಮಿಶ್ರ ಸರ್ಕಾರದ ಬುಡವನ್ನೇ ಅಲ್ಲಾಡಿಸಿದೆ. ಹಾಗಾಗಿ ಸಂಪುಟ ವಿಸ್ತರಣೆಗೆ ಕೈ ಹಾಕುವ ಧೈರ್ಯ ಕಾಂಗ್ರೆಸ್ ನಾಯಕರಲ್ಲಿ ಇಲ್ಲ.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ನಂತರ ಜಾರಕಿಹೊಳಿ ಬ್ರದರ್ಸ್ ಹಾಗೂ ಅವರ ಜತೆ ಗುರುತಿಸಿಕೊಂಡಿರುವ ಶಾಸಕರ ಕೋಪ-ತಾಪ, ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸೇರಲು ಕೆಲ ಕಾಂಗ್ರೆಸ್ ಶಾಸಕರು ಮನಸ್ಸು ಮಾಡಿರುವುದು, ಬಿಜೆಪಿ ನಾಯಕರೂ ಸಹ ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಗಾಳ ಹಾಕಿ ಆಪರೇಷನ್ ಕಮಲಕ್ಕೆ ಸಿದ್ಧತೆ ನಡೆಸಿರುವುದು ಕಾಂಗ್ರೆಸ್ ನಾಯಕರಲ್ಲಿ ತಳಮಳಕ್ಕೆ ಕಾರಣವಾಗಿದೆ.

ಇಂತಹ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯಂತಹ ದುಸ್ಸಾಹಸ ಬೇಡ ಎಂಬ ನಿಲುವು ಕಾಂಗ್ರೆಸ್ ವರಿಷ್ಠರದಾಗಿದೆ. ಹಾಗಾಗಿ ಸಂಪುಟ ವಿಸ್ತರಣೆ ಮತ್ತಷ್ಟು ತಡವಾಗಲಿದೆ.

ಈಗಿನ ರಾಜ್ಯ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಸಂಪುಟ ವಿಸ್ತರಣೆ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆಗಳು ಹೆಚ್ಚು.

ಈ ತಿಂಗಳ ಕೊನೆಯಲ್ಲಿ ನಡೆಯುವ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಹಾಗೂ ವಿಧಾನಪರಿಷತ್‌ನ ಮೂರು ಸ್ಥಾನಗಳ ಚುನಾವಣೆ ನಂತರವೇ ಸಂಪುಟ ವಿಸ್ತರಣೆಯ ಬಗ್ಗೆ ಕಾಂಗ್ರೆಸ್ ನಾಯಕರು ಚಿಂತನೆ ಮಾಡಬಹುದು. ಅಲ್ಲಿಯವರೆಗೂ ಸಂಪುಟ ವಿಸ್ತರಣೆ ಬಿಲ್‌ಕುಲ್ ಇಲ್ಲ ಎನ್ನಬಹುದು.

ಕಾಂಗ್ರೆಸ್‌ನ ವರಿಷ್ಠ ನಾಯಕರು ಪಕ್ಷದಲ್ಲಿ ಅತೃಪ್ತಿ, ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಶಾಸಕರ ಅತೃಪ್ತಿಗಳಿಗೆ ಮದ್ದು ಅರೆಯುವ ಕೆಲಸ ಆರಂಭಗೊಂಡಿದೆ. ಈ ಎಲ್ಲ ಆಂತರಿಕ ಬೇಗುದಿಗಳು ಶಮನಗೊಂಡು ಎಲ್ಲವೂ ಒಂದು ಹಂತಕ್ಕೆ ಬಂದ ನಂತರವೇ ಸಂಪುಟ ವಿಸ್ತರಣೆ ಆಗಲಿದೆ.

ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ಧರಾಮಯ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ವಿದೇಶದಿಂದ ವಾಪಸ್ಸಾಗುವುದು ಇನ್ನು 2-3 ದಿನವಾಗುತ್ತದೆ. ಹಾಗಾಗಿ ಸಿದ್ಧರಾಮಯ್ಯ ವಿದೇಶದಿಂದ ಬಂದ ನಂತರ ಸಂಪುಟ ವಿಸ್ತರಣೆಯ ಬಗ್ಗೆ ತೀರ್ಮಾನಗಳು ಆಗಲಿವೆ.

ಈ ಎಲ್ಲ ಕಾರಣಗಳಿಂದ ಗಣೇಶ ಹಬ್ಬದ ನಂತರ ಸಚಿವ ಹುದ್ದೆ ಯೋಗ ಒಲಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ನ ಹಿರಿಯ ಶಾಸಕರು ಸಚಿವ ಹುದ್ದೆಗೆ ಮತ್ತಷ್ಟು ದಿನ ಕಾಯುವುದು ಅನಿವಾರ್ಯ. ಜತೆಗೆ ಶಾಸಕರಿಗೆ ಕಾಯುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂದು ಹೇಳಬಹುದು.

Leave a Comment