ಸಂಪುಟ ವಿಸ್ತರಣೆ ಕೈ ಬಿಡಿ ಪುನರ್‌ರಚಿಸಿ

ಸಚಿವಾಕಾಂಕ್ಷಿಗಳ ಲಾಬಿ ಕಾಂಗ್ರೆಸ್ ನಾಯಕರಿಗೆ ತಲೆನೋವು
ಬೆಂಗಳೂರು, ಜೂ. ೧೧- ಸಚಿವ ಸಂಪುಟ ವಿಸ್ತರಣೆ ಕೈಬಿಟ್ಟು ಸಂಪುಟ ಪುನಾರಚಿಸುವಂತೆ ಸಚಿವಾಕಾಂಕ್ಷಿ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರಿರುವುದು ರಾಜಕೀಯ ಪರಿಸ್ಥಿತಿ ಬಿಗಡಾಯಿಸುವಂತಾಗಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿರುವುದು ನಾಳೆ ನಡೆಯಬೇಕಿದ್ದ ಸಂಪುಟ ವಿಸ್ತರಣೆ ಜೂ. 14ಕ್ಕೆ ಮುಂದೂಡಲಾಗಿದೆ. ಸಂಪುಟ ವಿಸ್ತರಣೆ ಮಾಡದೆ ಸಂಪುಟ ಪುನರ್ ರಚಿಸುವಂತೆ ಕಾಂಗ್ರೆಸ್‌ನ ಶಾಸಕರು ತೀವ್ರ ಒತ್ತಡ ಹೇರಿರುವುದು ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಂಪುಟ ವಿಸ್ತರಣೆಯಲ್ಲಿ ಪಕ್ಷೇತರ ಶಾಸಕರಿಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲು ನಿರ್ಧರಿಸಿರುವುದು ಎರಡೂ ಪಕ್ಷಗಳಲ್ಲಿ ನಿಷ್ಠ ಶಾಸಕರನ್ನು ಕೆರಳಿಸಿದೆ. ವಿಸ್ತರಣೆಗಿಂತ ಸಂಪುಟ ಪುನಾರಚಿಸಿ ಎಂಬ ಬೇಡಿಕೆಯನ್ನು ಈ ಶಾಸಕರುಗಳು ವರಿಷ್ಠರ ಮುಂದಿಟ್ಟಿರುವುದು ಸಂಪುಟ ಸಂಕಟ ಹೆಚ್ಚಾಗುವಂತಾಗಿದೆ.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ 1 ಡಜನ್‌ಗೂ ಹೆಚ್ಚು ಶಾಸಕರುಗಳು ತಮಗೆ ಸಚಿವ ಸ್ಥಾನ ಸಿಗುವುದು ಕಷ್ಟ ಎಂಬುದು ಅರಿವಾಗುತ್ತಿದ್ದಂತೆಯೇ ವಿಸ್ತರಣೆ ಬೇಡ ಸಂಪುಟ ಪುನಾರಚಿಸಿ ನಿಷ್ಠ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಿ ಎಂದು ಒತ್ತಡ ಹೇರಿ, ಸಚಿವ ಸ್ಥಾನ ಕೈತಪ್ಪಿದರೆ ತಮ್ಮ ಮುಂದಿನ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ. ಎಂಬ ಮಾತುಗಳನ್ನೂ ಹೇಳಿರುವುದು ನಾಯಕರಿಗೆ ತಲೆನೋವು ತಂದಿದೆ.
ಸಂಪುಟ ವಿಸ್ತರಿಸಬೇಕೋ, ಪುನಾರಚಿಸಬೇಕೋ ಎಂಬ ಗೊಂದಲ ಸೃಷ್ಠಿಯಾಗಿದೆ. ವಿಸ್ತರಣೆ ಒಳ್ಳೆಯದೋ ಪುನಾರಚನೆ ಸೂಕ್ತವೋ ಎಂಬ ಗೊಂದಲಕ್ಕಿ ಸಿಲುಕಿರುವ ನಾಯಕರುಗಳು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಲು ಮೀನಾ-ಮೇಷ ಎಣಿಸುವಂತಾಗಿದೆ.
ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟ ಪುನಾರಚಿಸಲು ಮುಂದಾಗಿದ್ದರೂ ಕಾಂಗ್ರೆಸ್‌ನಿಂದ ಐವರು, ಜೆಡಿಎಸ್‌ನಿಂದ ಮೂವರು ಸಚಿವರ ರಾಜೀನಾಮೆ ಕೊಡಿಸಿ ಖಾಲಿ ಇರುವ ಮೂರು ಸ್ಥಾನಗಳೂ ಸೇರಿದಂತೆ 10-12 ಮಂದಿ ಅತೃಪ್ತ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಿ ಸರ್ಕಾರವನ್ನು ಸುಭದ್ರಗೊಳಿಸುವ ಲೆಕ್ಕಾಚಾರ ಮುಖ್ಯಮಂತ್ರಿಯವರದ್ದಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಬೇಡ ಎಂದು ಪಟ್ಟು ಹಿಡಿದು ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಿ, ಸಂಪುಟ ವಿಸ್ತರಿಸಿ ಎಂದು ಸಲಹೆ ಮಾಡಿದ್ದರು.
ಹೀಗಾಗಿ, ಅನಿವಾರ್ಯವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಸಲಹೆಯಂತೆ ಸಹಮತ ಸಂಪುಟ ವಿಸ್ತರಣೆಗೆ ತೀರ್ಮಾನಿಸಿ ರಾಜ್ಯಪಾಲರ ಜತೆ ಮಾತನಾಡಿ ಮುಹೂರ್ತ ನಿಗದಿ ಮಾಡಿದ್ದರು.
ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆಯೇ ಸಚಿವಾಕಾಂಕ್ಷಿ ಶಾಸಕರು ಲಾಬಿ ನಡೆಸಿ ಸಚಿವ ಪಟ್ಟಕ್ಕಾಗಿ ತಮ್ಮ ಗಾ‌ಡ್‌ಫಾದರ್‌ಗಳ ಮೂಲಕ ಒತ್ತಡ ಹೇರಿದ್ದರು. ಈ ಎಲ್ಲ ಒತ್ತಡದಿಂದ ಪಾರಾಗಲು ತಮ್ಮದೇ ಆದ ತಂತ್ರ ಹೆಣೆದ ಎರಡೂ ಪಕ್ಷಗಳ ನಾಯಕರು ಸಂಪುಟ ವಿಸ್ತರಣೆಯಲ್ಲಿ ಪಕ್ಷೇತರರಿಗಷ್ಟೇ ಸ್ಥಾನ ಸಂಪುಟ ಪುನಾರಚನೆಯಾದಾಗ ನಿಷ್ಠ ಶಾಸಕರನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದು, ಇದು ಶಾಸಕರಲ್ಲಿ ಅತೃಪ್ತಿ-ಅಸಮಾಧಾನ ಸ್ಫೋಟಗೊಳ್ಳಲು ಕಾರಣವಾಗಿತ್ತು.
ಶಾಸಕರ ಅಸಮಾಧಾನ -ಅತೃಪ್ತಿಯನ್ನು ತಣಿಸುವ ಪ್ರಯತ್ನಗಳು ನಡೆದಿದ್ದರೂ ನಿಷ್ಠ ಹಾಗೂ ಅತೃಪ್ತ ಶಾಸಕರುಗಳು ಸಚಿವ ಪಟ್ಟಕ್ಕಾಗಿ ತಮ್ಮ ಪಟ್ಟನ್ನು ಸಡಿಲಿಸಲು ಒಪ್ಪದೇ ಇರುವುದು ಮುಂದೆ ವರಿಷ್ಠರಿಗೆ ತಲೆನೋವು ತಂದಿತ್ತು.
ಈ ಶಾಸಕರ ಅತೃಪ್ತಿ-ಅಸಮಾಧಾನದ ಬಗ್ಗೆ ಮುಂದೆ ಸರ್ಕಾರಕ್ಕೂ ಕಂಟಕ ತರಬಹುದು ಎಂಬ ಆತಂಕವೂ ಎರಡೂ ಪಕ್ಷಗಳ ನಾಯಕರನ್ನು ಕಾಡುತ್ತಿರುವುದು ಸುಳ್ಳೇನಲ್ಲ.
ಪುನಾರಚನೆಗೆ ಪಟ್ಟು
ಸಂಪುಟ ವಿಸ್ತರಣೆ ಎರಡು ದಿನ ಮುಂದಕ್ಕೆ ಹೋಗುತ್ತಿದ್ದಂತೆಯೇ ಎರಡೂ ಪಕ್ಷಗಳ ಸಚಿವಾಕಾಂಕ್ಷಿ ಶಾಸಕರುಗಳು ವಿಸ್ತರಣೆಗಿಂತ ಸಂಪುಟ ಪುನಾರಚಿಸಿ ಎಂಬ ಕೂಗು ದೆಹಲಿ ನಾಯಕರ ಕಿವಿಗೆ ಅಪ್ಪಳಿಸುವಂತಾಗಿದೆ. ಇದರಿಂದ ಬೆಚ್ಚಿ ಬಿದ್ಜಿರುವ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸಂಪುಟ ಪುನಾರಚಿಸದಿದ್ದರೆ ತಮ್ಮದಾರಿಗೆ ತಮಗೆ ಎಂಬ ಮಾತುಗಳನ್ನೂ ಈ ಶಾಸಕರುಗಳು ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ನಿನ್ನೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗಿಂತ ಪುನಾರಚನೆಯೇ ಸೂಕ್ತ ಎಂದು ಹೇಳಿದ್ದಾರೆ.
ಸಂಪುಟ ಪುನಾರಚನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆ. ಅವರಿಗೆ ಕರೆದು ಬುದ್ಧಿ ಹೇಳಿ ಎಂದು ಕಾಂಗ್ರೆಸ್ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.
ಏಳೆಂಟು ಸಚಿವರನ್ನು ಕೈಬಿಟ್ಟು ಖಾಲಿ ಇರುವ ಸ್ಥಾನಗಳನ್ನು ಸೇರಿಸಿ 8-10 ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ ಸಮ್ಮಿಶ್ರ ಸರ್ಕಾರದ ಸ್ಥಿರತೆಗೆ ತೊಂದರೆಯಾಗುವುದಿಲ್ಲ ಎಂಬುದನ್ನೂ ದೇವೇಗೌಡರು ರಾಹುಲ್‌ಗಾಂಧಿಯವರ ಗಮನಕ್ಕೆ ತಂದಿದ್ದಾರೆ. ಜತೆಗೆ ವಿಸ್ತರಣೆಗಿಂತ ಪುನಾರಚನೆಯೇ ಸೂಕ್ತ ಎಂಬುದನ್ನು ದೇವೇಗೌಡರು ಸೂಚ್ಯವಾಗಿ ರಾಹುಲ್‌ಗಾಂಧಿಯವರಿಗೆ ವಿವರಿಸಿದ್ದಾರೆ. ಹಾಗಾಗಿ, ಸದ್ಯದಲ್ಲೇ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ನಾಳೆ ಇಲ್ಲವೇ ನಾಳಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ನಗರಕ್ಕೆ ಆಗಮಿಸಲಿದ್ದು, ಸಂಪುಟ ವಿಸ್ತರಣೆ, ಪುನಾರಚನೆ, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಚರ್ಚಿಸಲಿದ್ದಾರೆ. ಈ ದೋಸ್ತಿ ನಾಯಕರ ಸಭೆಯ ನಂತರವೇ ಸಂಪುಟ ವಿಸ್ತರಣೆಗೆ, ಪುನಾರಚನೆಗೆ ಒಂದು ಅಂತಿಮ ರೂಪ ಸಿಗಲಿದೆ.

Leave a Comment