ಸಂಪುಟ ವಿಸ್ತರಣೆ ಕಾಂಗ್ರೆಸ್‌ನಲ್ಲಿ ಅತೃಪ್ತಿ

ಬೆಂಗಳೂರು, ಜೂ. ೧೪- ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಅವಕಾಶ ವಂಚಿತ ಕಾಂಗ್ರೆಸ್ ಶಾಸಕರು ಅತೃಪ್ತಿ, ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರ ನಿರ್ಧಾರದಿಂದ ಮುಂದೆ ಎದುರು ಆಗುವ ಪ್ರತಿಫಲವನ್ನು ನಾಯಕರೇ ಎದುರಿಸುತ್ತಾರೆ ಎಂದು ಸಚಿವ ಸ್ಥಾನ ವಂಚಿತರಾದ ಹಲವು ಶಾಸಕರು ನೇರವಾಗಿ ಹೇಳಿರುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಆರ್. ಶಂಕರ್ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಿರುವುದು ಹಲವು ಕಾಂಗ್ರೆಸ್ ಶಾಸಕರ ಕೆಂಗೆಣ್ಣಿಗೆ ಗುರಿಯಾಗಿದೆ. ಈ ಬಾರಿಯಾದರೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷಿಯಲ್ಲಿದ್ದ ರಾಮಲಿಂಗಾರೆಡ್ಡಿ, ಬಿ.ಸಿ. ಪಾಟೀಲ್, ಕೆ. ಸುಧಾಕರ್, ಜೆಡಿಎಸ್ ಶಾಸಕ ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಸೇರಿದಂತೆ ಅನೇಕ ಶಾಸಕರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಅದರಲ್ಲೂ ಹಲವು ಕಾಂಗ್ರೆಸ್ ಶಾಸಕರು ನೇರವಾಗಿ ತಮ್ಮ ಅತೃಪ್ತಿ ಹೊರ ಹಾಕಿರುವುದು. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಅದರಲ್ಲೂ ಚಿಕ್ಕಬಳ್ಳಾಪುರದ ಶಾಸಕ ಸುಧಾಕರ್, ರಾಹುಲ್ ಗಾಂಧಿ ಅವರ ಮಾತಿಗೆ ಬೆಲೆಯಿಲ್ಲ. ಬೆಲೆಯಿದಿದ್ದರೇ ನನಗೆ ಸಚಿವ ಸ್ಥಾನ ಸಿಗುತ್ತಿತ್ತು ಎಂದು ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಈ ಹಿಂದೆ ಸಚಿವ ಸ್ಥಾನ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರೂ ಅದು ನೇರವೇರಲಿಲ್ಲ. ಹೀಗಾಗಿ ಯಾವುದೇ ಮುಖಂಡರನ್ನು ಭೇಟಿ ಮಾಡುವುದಿಲ್ಲ, ಅದರ ಅಗತ್ಯವು ಇಲ್ಲ ಎಂದು ಹೇಳಿದ್ದಾರೆ.

Leave a Comment