ಸಂಪುಟ ವಿಸ್ತರಣೆ:ಪಕ್ಷೇತರರಿಗೆ ಮಣೆ

ಬೆಂಗಳೂರು, ಜೂ 13 – ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಶುಕ್ರವಾರ ಮಧ್ಯಾಹ್ನ 1 ಕ್ಕೆ ನಿಗದಿಯಾಗಿದ್ದು, ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ನಾಗೇಶ್ ಮಂತ್ರಿಮಂಡಲದ ನೂತನ ಸದಸ್ಯರಾಗಿ ಅಧಿಕಾರಪದ ಮತ್ತು ಗೋಪ್ಯತಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿವಾಲಾ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರ್ಕಾರದಲ್ಲಿ ತಲೆದೋರಿದ್ದ ಆಂತರಿಕ ಬಂಡಾಯ ಮತ್ತು ಭಿನ್ನಮತ ಹಿನ್ನೆಲೆಯಲ್ಲಿ ಸರ್ಕಾರವನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಈ ಬಾರಿ ಪಕ್ಷೇತರರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗುತ್ತಿದೆ.ಕಳೆದ ಬುಧವಾರವೇ ಸಂಪುಟ ವಿಸ್ತರಣೆ ನಡೆಯಬೇಕಿತ್ತು. ಆದರೆ ಹಿರಿಯ ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿತ್ತು. ಹೀಗಾಗಿ ಪ್ರಮಾಣವಚನ ಕಾರ್ಯಕ್ರಮ ಶುಕ್ರವಾರಕ್ಕೆ ಮುಂದೂಡಲಾಗಿತ್ತು.
ಸಂಪುಟ ಪುನಾರಚನೆಗೆ ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಸಮ್ಮತಿ ಸೂಚಿಸಿದ್ದರಾದರೂ ಇದಕ್ಕೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಪುನಾರಚನೆಯ ಬದಲು ವಿಸ್ತರಣೆಗೆ ಮುಖ್ಯಮಂತ್ರಿ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರ ಈ ನಡೆ ಕುರಿತು ಜೆಡಿಎಸ್ ವರಿಷ್ಠ , ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕಳೆದೆರೆಡು ದಿನಗಳ ಹಿಂದೆ ಭೇಟಿ ಮಾಡಿ ದೂರು ನೀಡಿದ್ದರು ಎನ್ನಲಾಗಿದೆ.

ಸಂಪುಟ ಪುನಾರಚನೆ ಆಗದೇ ಹೊರತು ಮೈತ್ರಿ ಸರ್ಕಾರ ಗಟ್ಟಿಗೊಳ್ಳುವುದಿಲ್ಲ ಎಂಬುದನ್ನು ದೇವೇಗೌಡರು, ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸದ್ಯಕ್ಕೆ ವಿಸ್ತರಣೆ ಮಾಡಿ ಬಳಿಕ ಅಗತ್ಯ ಬಿದ್ದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ಕೆಲವು ಪಕ್ಷ ನಿಷ್ಠ ಹಾಗೂ ನಿರುಪದ್ರವಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಆದ್ಯತೆ ನೀಡಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಪಕ್ಷೇತರರೊಬ್ಬರಿಗೆ ಜೆಡಿಎಸ್‍ ಕೋಟಾ ಬಿಟ್ಟುಕೊಟ್ಟ ಪರಿಣಾಮ ಜೆಡಿಎಸ್‍ನಲ್ಲಿ ಸಂಘರ್ಷ ಆರಂಭವಾಗಿದ್ದು, ಸಚಿವಾಕಾಂಕ್ಷಿಗಳು ದೇವೇಗೌಡ ಹಾಗೂ ಕುಮಾರಸ್ವಾಮಿ ಮೇಲೆ ತಮ್ಮನ್ನು ಮಂತ್ರಿಮಂಡಲಕ್ಕೆ ಸೇರಿಸುವಂತೆ ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ.
ಆರ್.ಶಂಕರ್ ಮತ್ತು ನಾಗೇಶ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿರುವುದು ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೇ ಇದಕ್ಕೆ ದೇವೇಗೌಡರು ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಅತೃಪ್ತರನ್ನು ಸರಿದಾರಿಗೆ ತರಲು ಸೂಕ್ತ ಕಾರ್ಯತಂತ್ರ ರೂಪಿಸದೇ ಪಕ್ಷೇತರರಿಗೆ ಮಣೆಹಾಕಿರುವುದು ಸಿದ್ದರಾಮಯ್ಯ ಅವರ ರಾಜಕೀಯ ಮರ್ಮದ ಬಗ್ಗೆ ದೇವೇಗೌಡರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‍ ಅವರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.

ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿ, ತಮ್ಮ ಆಪ್ತರು ಮಂತ್ರಿಮಂಡಲ ಸೇರುತ್ತಿದ್ದರೂ ಸಿದ್ದರಾಮಯ್ಯ ಮಾತ್ರ ಮೌನವಾಗಿಯೇ ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದಾರೆ. ಈಗಾಗಲೇ ಜೆಡಿಎಸ್ ಎರಡೂ ಕೋಟಾ ಪೈಕಿ ಒಂದನ್ನು ಪಕ್ಷೇತರರಿಗೆ ಬಿಟ್ಟುಕೊಟ್ಟಿದೆ. ಜೆಡಿಎಸ್‍ ಬಳಿ ಉಳಿದಿರುವ ಇನ್ನೊಂದು ಸ್ಥಾನವನ್ನು ಕಾಂಗ್ರೆಸ್‍ ತನಗೆ ನೀಡುವಂತೆ ಕೇಳುತ್ತಿದ್ದು, ಈ ಕೋಟಾದಲ್ಲಿ ರಾಮಲಿಂಗಾರೆಡ್ಡಿ ಅಥವಾ ಇತರೆ ಬೇರೆ ಅತೃಪ್ತರಿಗೆ ಅವಕಾಶ ಕಲ್ಪಿಸಲು ಯೋಜನೆ ರೂಪಿಸಿದೆ. ಇದು ಕೂಡ ಸಿದ್ದರಾಮಯ್ಯ ಅವರ ಸಲಹೆಯೇ ಎನ್ನಲಾಗುತ್ತಿದ್ದು, ಇದು ಜೆಡಿಎಸ್‍ ವರಿಷ್ಠರ ಕಣ್ಣು ಕೆಂಪಗೆ ಮಾಡಿದೆ.

ಮತ್ತೊಂದು ಕಡೆ ಕಾಂಗ್ರೆಸ್‍ ಪಕ್ಷದ ಬಂಡಾಯ ಶಾಸಕರಾಗಿರುವ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ರಾಮಲಿಂಗಾರೆಡ್ಡಿ ಸೇರಿದಂತೆ ಇತರೆ ಶಾಸಕರು ಸಂಪುಟ ವಿಸ್ತರಣೆಯ ನಿರೀಕ್ಷೆಯಲ್ಲಿದ್ದು, ವಿಸ್ತರಣೆ ಬಳಿಕ ತಮ್ಮ ಅಸಲಿ ಆಟ ಶುರುಮಾಡಲಿದ್ದಾರೆ. ಸಚಿವಾಕಾಂಕ್ಷಿಯಾಗಿರುವ ರೋಷನ್ ಬೇಗ್ ಮೇಲೆ ಐಎಂಎ ಹಗರಣದ ಆರೋಪ ಕೇಳಿಬಂದಿರುವ ಹಿನ್ನೆಲೆ ಅವರು ಸದ್ಯಕ್ಕೆ ಸಚಿವರಾಗುವ ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ.

Leave a Comment