ಸಂಪುಟ ಉಪಸಮಿತಿಯಿಂದ ಬರ ಅಧ್ಯಯನ

ತುಮಕೂರು, ಜ. ೧೨- ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಸಚಿವ ಸಂಪುಟದ ಉಪಸಮಿತಿಯು ಇಂದು ಭೇಟಿ ನೀಡಿ ಮಳೆ ಕೊರತೆಯಿಂದ ಆಗಿರುವ ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳ ಮೇವಿನ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿತು.

ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ತುಮಕೂರು ತಾಲ್ಲೂಕುಗಳ ಬೆಳೆ ಹಾನಿ ತಾಕುಗಳಿಗೆ ಕೃಷಿ ಸಚಿವ ಶಿವಶಂಕರರೆಡ್ಡಿ ನೇತೃತ್ವದಲ್ಲಿ ಸಚಿವರಾದ ಎಸ್.ಆರ್. ಶ್ರೀನಿವಾಸ್, ವೆಂಕಟರಮಣಪ್ಪರವರನ್ನೊಳಗೊಂಡ ಸಚಿವ ಸಂಪುಟದ ಉಪಸಮಿತಿಯ ತಂಡ ತೆರಳಿ ಈ ಮೂರು ತಾಲ್ಲೂಕುಗಳಲ್ಲಿನ ಬರ ಪರಿಸ್ಥಿತಿಯನ್ನು ಅಧ್ಯಯನ ನಡೆಸಿ ರೈತರಿಂದ ವಾಸ್ತವ ಪರಿಸ್ಥಿತಿ ಕುರಿತು ಅಗತ್ಯ ಮಾಹಿತಿ ಕಲೆ ಹಾಕಿತು.

ಈ ಮೂರು ತಾಲ್ಲೂಕುಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಬಿತ್ತಿದ್ದ ಬೆಳೆ ರೈತನ ಕೈಸಿಗದೆ ನಷ್ಟ ಉಂಟಾಗಿರುವ ಪ್ರದೇಶಗಳನ್ನು ಪರಿಶೀಲಿಸಿದ ಉಪಸಮಿತಿ ಸದಸ್ಯರು ಬೆಳೆ ಹಾನಿಗೊಳಗಾದ ರೈತರ ಸಂಕಷ್ಟವನ್ನು ಕಣ್ಣಾರೆ ಕಂಡು ಕೂಡಲೇ ಬರ ಪೀಡಿತ ಪ್ರದೇಶಗಳ ರೈತರಿಗೆ ಬರ ಪರಿಹಾರ ಕಾಮಗಾರಿಯಡಿ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೂ ಮೊದಲು ಬೆಂಗಳೂರಿನಿಂದ ಕೊರಟಗೆರೆ ತಾಲ್ಲೂಕಿನ ಅರಸಾಪುರಕ್ಕೆ ಬಂದ ಸಚಿವ ಸಂಪುಟದ ಉಪಸಮಿತಿಯ ಸದಸ್ಯರನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕೆ. ರಾಕೇಶ್‌ಕುಮಾರ್, ಜಿ.ಪಂ. ಸಿಇಓ ಅನೀಸ್ ಕಣ್ಮಣಿ ಜಾಯ್, ಅಡಿಷನಲ್ ಎಸ್ಪಿ ಡಾ. ಶೋಭರಾಣಿ ಅವರು ಪುಷ್ಪಗುಚ್ಚ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು.

ನಂತರ ಅರಸಾಪುರದಿಂದ 6 ಕಿ.ಮೀ. ದೂರದಲ್ಲಿರುವ ಬೈರೇನಹಳ್ಳಿ ಕ್ರಾಸ್‌ಗೆ ತೆರಳಿದ ಸದಸ್ಯರು, ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿದರು. ನಂತರ 5 ಕಿ.ಮೀ. ದೂರದ ಮಧುಗಿರಿ ತಾಲ್ಲೂಕಿನ ಚನ್ನಸಾಗರಕ್ಕೆ ಧಾವಿಸಿದ ಈ ತಂಡ ಅಲ್ಲಿ ನಿರ್ಮಿಸಲಾಗಿದ್ದ ಜಾನುವಾರು ಕುಡಿಯುವ ನೀರಿನ ತೊಟ್ಟಿ ಮತ್ತು ಮೇವಿನ ಕಿರುಪೊಟ್ಟಣ ತಾಕುಗಳನ್ನು ಪರಿಶೀಲಿಸಿತು.

ಮಧುಗಿರಿ ತಾಲ್ಲೂಕಿನ ರಂಗನಹಳ್ಳಿಗೆ ಭೇಟಿ ನೀಡಿದ ಉಪಸಮಿತಿಯ ಸದಸ್ಯರು ಈ ಗ್ರಾಮದಲ್ಲಿ ರೈತರುಗಳು ನಿರ್ವಹಣೆ ಮಾಡಿದ್ದ ರೇಷ್ಮೆ ಬೆಳೆ ಅಭಿವೃದ್ಧಿ ತಾಕುಗಳನ್ನು ವೀಕ್ಷಿಸಿ, ಇದೇ ಮಾದರಿಯಲ್ಲಿ ಉಳಿದ ರೈತರು ರೇಷ್ಮೆ ಬೆಳೆ ಬೆಳೆಯಲು ಮುಂದಾದರೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬಹುದು. ಈ ಬಗ್ಗೆ ರೈತರಲ್ಲಿ ಮತ್ತಷ್ಟು ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಾದ ಬಳಿಕ ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಳಿಯಲ್ಲಿ ಮೇವಿನ ಕಿರುಪೊಟ್ಟಣ ತಾಕುಗಳನ್ನು ವೀಕ್ಷಿಸಿದ ಸದಸ್ಯರು, ಗಟ್ಲಹಳ್ಳಿಗೆ ತೆರಳಿ ಗೋಕಟ್ಟೆ ಅಭಿವೃದ್ಧಿಯನ್ನು ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಅಧ್ಯಯನ, ಪರಿಹಾರ ಹಾಗೂ ನಿರ್ವಹಣೆಯನ್ನು ಪರಿಶೀಲಿಸಿದ ಸಚಿವ ಶಿವಶಂಕರರೆಡ್ಡಿ ನೇತೃತ್ವದ ಉಪಸಮಿತಿಯ ಸದಸ್ಯರು, ತುಮಕೂರು ತಾಲ್ಲೂಕಿನ ಬೆಳಧರ ಗ್ರಾಮದಲ್ಲಿ ಹಾನಿಗೊಳಗಾಗಿರುವ ಹುರುಳಿ ಬೆಳೆ ತಾಕುಗಳನ್ನು ಪರಿಶೀಲಿಸಿ, ಈ ಬೆಳೆ ನಷ್ಟದ ಬಗ್ಗೆ ರೈತರಿಂದ ಮಾಹಿತಿ ಪಡೆದು, ಸರ್ಕಾರದಿಂದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಅಧಿಕಾರಿಗಳಿಗೆ ಸೂಚನೆ
ನಂತರ ತುಮಕೂರು ಜಿಲ್ಲಾ ಪಂಚಾಯತ್ ಕಚೇರಿಗೆ ಆಗಮಿಸಿದ ಸದಸ್ಯರು ಈ ಮೂರು ತಾಲ್ಲೂಕುಗಳಲ್ಲಿ ಅಧ್ಯಯನ ನಡೆಸಿದ ಬರ ನಿರ್ವಹಣೆ ಕುರಿತು ಪರಿಶೀಲನಾ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಬರ ಪೀಡಿತ ಪ್ರದೇಶಗಳ ರೈತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ತಾರತಮ್ಯವೆಸಗಬಾರದು. ಹಾಗೆಯೇ ಜನಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸರ್ಕಾರ ಜಿಲ್ಲೆಯ 10 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡಿದೆ. ಹಾಗಾಗಿ ಯಾವ ತಾಲ್ಲೂಕುಗಳಲ್ಲೂ ಬರ ನಿರ್ವಹಣೆ ಕುರಿತು ಲೋಪಗಳಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ನಿರ್ವಹಣಾಧಿಕಾರಿಗಳಿಗೆ ಕೃಷಿ ಸಚಿವ ಶಿವಶಂಕರರೆಡ್ಡಿ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment