ಸಂಪುಟದಲ್ಲಿ 13 ಜಿಲ್ಲೆಗಳಿಗೆ ಸಿಗದ ಪ್ರಾತಿನಿಧ್ಯ  ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಳ:ಸಿದ್ದರಾಮಯ್ಯ

 

ಕಲಬುರಗಿ,ಫೆ.8-ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜ್ಯದ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡದೇ ಇರುವುದರಿಂದ ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅವರ ಪಕ್ಷದ ಹೈಕಮಾಂಡ್ ಯಾವುದೇ ಅಧಿಕಾರ ನೀಡಿಲ್ಲ. ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ವಾತಂತ್ರ್ಯ ನೀಡಿಲ್ಲ. ಖಾತೆ ಹಂಚಿಕೆ ಮಾಡದಷ್ಟು ಇಕ್ಕಟ್ಟಿನ ಸ್ಥಿತಿಯಲ್ಲಿ ಯಡಿಯೂರಪ್ಪ ಇದ್ದಾರೆ ಎಂದರು.

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಭವಾಗಿದೆ ಎಂದ ಅವರು, ಸದ್ಯದಲ್ಲಿಯೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಿಳಿಸಿದರು.

ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು ಬಡ್ತಿ ಮೀಸಲಾತಿ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಎಲ್ಲೂ ನಮ್ಮ ಕಾನೂನು “ಸ್ಟ್ರಕ್ ಡೌನ್”ಮಾಡಿಲ್ಲ. ಕೋರ್ಟನ ಪೂರ್ಣವಾಗಿ ಪರಿಶೀಲನೆ ನಂತರ ಇದಕ್ಕೆ ಉತ್ತರಿಸುತ್ತೇನೆ ಎಂದು ಹೇಳಿದರು.

 

Leave a Comment