ಸಂತ್ರಸ್ಥರಿಗೆ ನೆರವು ಸರ್ಕಾರಕ್ಕೆ ಸವಾಲು: ಬೀದಿ ಬದಿಯಲ್ಲಿ ಬದುಕು, ಮುಗಿಲು ಮುಟ್ಟಿದ ಬಾಧಿತರ ಆಕ್ರಂದನ

ಬೆಂಗಳೂರು/ಹುಬ್ಬಳ್ಳಿ, ಆ. ೧೩- ರಾಜ್ಯದ 17 ಜಿಲ್ಲೆಗಳ ಜನ ಮಳೆ ಹಾಗೂ ಪ್ರವಾಹದಿಂದ ಅಕ್ಷರಶಃ ತತ್ತರಿಸಿ ಹೋಗಿದ್ದು, ಸಂತ್ರಸ್ಥರಿಗೆ ಹೊಸ ಬದುಕು ಕಟ್ಟಿಕೊಡುವುದು ರಾಜ್ಯಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

ಮಳೆ ನಿಂತರೂ ಪ್ರವಾಹದಿಂದ ಸಂಕಷ್ಟಕ್ಕೊಳಗಾದವರ ಕಣ್ಣೀರು-ಆಕ್ರಂದನ ಕಡಿಮೆಯಾಗಿಲ್ಲ. ಎಲ್ಲವೂ ಇದ್ದು ಸರ್ವಸ್ವವನ್ನೂ ಕಳೆದುಕೊಂಡಿರುವ ಜನರ ಆರ್ತನಾದ ಮುಗಿಲು ಮುಟ್ಟಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಲಾವೃತಗೊಂಡಿರುವ ಗ್ರಾಮಗಳ ಜನರ ಬದುಕು ನೀರಿನಲ್ಲಿ ಮುಳುಗಿ ಹೋಗಿದೆ. ಇದರಿಂದಾಗಿ ರಾಜ್ಯದಲ್ಲಿ ಸರಿಸುಮಾರು 50 ಸಾವಿರ ಕೋಟಿಗೂ ಅಧಿಕ ಕೋಟಿಗೂ ನಷ್ಟವಾಗಿದೆ ಎಂದು ಪ್ರಾಥಮಿಕ ಅಂದಾಜಿನ ಮೂಲಗಳಿಂದ ಮಾಹಿತಿಗಳು ಲಭ್ಯವಾಗಿವೆ.

ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವವರ ನೋವು ಹೇಳತೀರದಾಗಿದೆ. ಪ್ರವಾಹಪೀಡಿತ ಗ್ರಾಮಗಳಲ್ಲಿ ಹನಿ ಹನಿ ಕುಡಿಯುವ ನೀರಿಗೂ ಜನರು ಪರದಾಡುವಂತಾಗಿದೆ. ಹಸಿದ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ಒದಗಿಸುತ್ತಿರುವ ಕುಡಿಯುವ ನೀರು ಏನೇನೂ ಸಾಧ್ಯವಾಗುತ್ತಿಲ್ಲ.

ಕೊಡಗು, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗಗಳಲ್ಲಿ ಇನ್ನೂ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪ್ರವಾಹದಿಂದಾಗಿ ರಾಜ್ಯದಲ್ಲಿ 48ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 16 ಮಂದಿ ಕಾಣೆಯಾಗಿದ್ದಾರೆ. ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ಮಳೆ ಹಾಗೂ ಪ್ರವಾಹದಿಂದಾಗಿ 2,738 ಗ್ರಾಮಗಳು ಜಲಾವೃತವಾಗಿದ್ದು, 41,915 ಮನೆಗಳು ಹಾನಿಯಾಗಿದ್ದು, 4 ಲಕ್ಷದ 30 ಲಕ್ಷ ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. ಮಳೆಯಿಂದ 6 ಲಕ್ಷದ 77 ಸಾವಿರ ಮಂದಿಯನ್ನು ಕಳೆದೊಂದು ವಾರದಿಂದ ರಕ್ಷಿಸಿ 1124 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.

ಮಳೆ ಹಾಗೂ ಪ್ರವಾಹದಿಂದ ಸರಿಸುಮಾರು 50 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದ್ದು, 10 ಸಾವಿರ ಕೋಟಿ ರೂ. ಪರಿಹಾರ ಕೈಗೊಳ್ಳಲು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಇದೇ 16 ರಂದು ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿಯೂ ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮಹಾಮಳೆಗೆ ಸಾವಿನ ಸಂಖ್ಯೆ 3ಕ್ಕೇರಿದೆ. ತಾಲ್ಲೂಕಿನ ಕೌಶಿಕ ಗ್ರಾಮದಲ್ಲಿ ಮನೆ ಕುಸಿದು ಅವಶೇಷಗಳಡಿ ಸಿಲುಕಿದ್ದ ರಂಗಮ್ಮ ಅವರು ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆಲೂರು ತಾಲ್ಲೂಕಿನ ಮಹಿಳೆ ಪುಷ್ಪಾ ಶಂಕುತೀರ್ಥ ನದಿಯ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದರು. ನಿನ್ನೆ ಅವರ ಮೃತದೇಹ ಪತ್ತೆಯಾಯಿತು. ಸಕಲೇಶಪುರ ತಾಲ್ಲೂಕಿನ ಹುರುಳಿಯ ಪ್ರಕಾಶ್ ಕೂಡ ಮೃತಪಟ್ಟಿದ್ದರು.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಗ್ರಾಮಸ್ಥರು ರೋಧಿಸುತ್ತಿದ್ದಾರೆ. ಬೆಟ್ಟ-ಗುಡ್ಡಗಳ ಭಾಗದಿಂದ ಬಹುತೇಕ ಗ್ರಾಮಗಳು ನೆಲಸಮವಾಗಿವೆ.

ನೆರೆ ಸಂತ್ರಸ್ಥರ ಆಕ್ರಂದನ
ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ಜನತೆ, ಒಂದೆಡೆ ಪ್ರಾಣಾಪಾಯದಿಂದ ಪಾರಾಗಿದ್ದರೆ, ಸದ್ಯ ಪ್ರವಾಹದ ನಂತರ ಪ್ರಾಣಸಂಕಟಗಳನ್ನು ಎದುರಿಸುವಂತಾಗಿದೆ.

ಪ್ರವಾಹದಿಂದಾಗಿ ಮನೆ – ಮಠಗಳನ್ನು ಕಳೆದುಕೊಂಡು ಸುಮಾರು ದಿನಗಳಿಂದ ಗಂಜಿ ಕೇಂದ್ರಗಳಲ್ಲಿ ತಂಗಿರುವ ಜನತೆ, ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದಾರೆ. ಸುಮಾರು ಗಂಜೀ ಕೇಂದ್ರಗಳಲ್ಲಿನ ಅವ್ಯವಸ್ಥೆಯಿಂದ ಸಂತ್ರಸ್ತರು ತುತ್ತು ಅನ್ನಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ.

ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಲಕ್ಷಾಂತರ ಸಂತ್ರಸ್ತರು ಗಂಜೀಕೇಂದ್ರಗಳಲ್ಲಿ ತಂಗಿದ್ದು, ಬಾಗಲಕೋಟ ಜಿಲ್ಲೆಯ ಮಿರ್ಜಿ ಗ್ರಾಮವೊಂದರ ಗಂಜೀಕೇಂದ್ರದಲ್ಲಿ ಹಳಸಿದ ಅನ್ನವನ್ನು ಊಟಕ್ಕೆ ನೀಡಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳೀಯ ಪಿಡಿಓ ನರಸನ್ನವರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಿತ್ತೂರ್ ಅವರ ಮೇಲೆ ಹರಿಹಾಯ್ದು, ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ದೂರು ನೀಡಲು ತಹಸೀಲ್ದಾರ್ ಇಂಗಳೆ ಅವರಿಗೆ ದೂರವಾಣಿ ಸಂಪರ್ಕ ಮಾಡಿದರೆ ಅವರು ಕರೆಯನ್ನು ಸ್ವೀಕರಿಸಿಲ್ಲ ಎಂದು ಸಂತ್ರಸ್ತರು ದೂರಿದ್ದಾರೆ.

50 ಸಾವಿರ ಕೋಟಿ ನಷ್ಟ
ರಾಜ್ಯದಲ್ಲಿ ಉಂಟಾದ ಅತಿವೃಷ್ಠಿಯಿಂದ 50 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದ್ದು, ತಾತ್ಕಾಲಿಕವಾಗಿ ಪರಿಹಾರ ನೀಡಲು 10 ಸಾವಿರ ಕೋಟಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶಾಲಾ-ಕಾಲೇಜಿಗೆ ರಜೆ
ಕೊಡಗು-ಚಿಕ್ಕಮಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಇಂದು ಮತ್ತು ನಾಳೆ ಸೇರಿದಂತೆ ಇನ್ನೂ 5 ದಿನಗಳ ಕಾಲ ಮಳೆಯಾಗಲಿರುವ ಹಿನ್ನೆಲೆಯಲ್ಲಿ 2 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲೂ ರಜೆ ಘೋಷಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತವಾಗಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ.

48 ಮಂದಿ ಸಾವು
ಪ್ರವಾಹ ಹಾಗೂ ಮಳೆಯಿಂದ ರಾಜ್ಯದಲ್ಲಿ ಇದುವರೆಗೂ 48ಕ್ಕೂ ಅಧಿಕಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದ ಜನ ಮಳೆಯಿಂದ ಬಸವಳಿದಿದ್ದಾರೆ.
ರಾಜ್ಯದ 2738 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, 40,523 ಮನೆಗಳಿಗೆ ಹಾನಿಯಾಗಿದೆ. ಒಟ್ಟಾರೆ, 6 ಲಕ್ಷಕ್ಕೂ ಅಧಿಕ ಮಂದಿಯನ್ನು ರಕ್ಷಿಸಿ 1224 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.

ನೀರಿಗಾಗಿ ಪರದಾಟ
ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾನದಿಯಿಂದ 6 ಲಕ್ಷ ಕ್ಯೂಸೆಕ್ ಹಾಗೂ ಭೀಮಾನದಿಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ನದಿಪಾತ್ರದ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಜಲಾವೃತವಾಗಿರುವ ಗ್ರಾಮಗಳಲ್ಲಿ ಕುಡಿಯುವ ಹನಿ ನೀರಿಗೂ ಹಾಹಾಕಾರ ಪ‌ಡುವಂತಾಗಿದೆ.

Leave a Comment