ಸಂತ್ರಸ್ಥರಿಗೆ ನೆರವಾಗಲು ಶಾಸಕರಿಗೆ ಸಿಎಂ ಮನವಿ

ಬೆಂಗಳೂರು, ಆ. ೧೪- ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರೀ ಹಾನಿ ಉಂಟಾಗಿದ್ದು, ಪರಿಹಾರ ಮತ್ತು ಪುನರ್ ವಸತಿ ಕಾರ್ಯಗಳಿಗೆ ಕೈಗಾರಿಕೋದ್ಯಮಿಗಳ ನೆರವು ಪಡೆಯಲು ಶಾಸಕರು, ಸಂಸದರು ಮುಂದಾಗಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದು ಇಲ್ಲಿ ಕರೆನೀಡಿದರು.
ನಗರದ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿಂದು ಕರೆದಿದ್ದ ಬಿಜೆಪಿ ಶಾಸಕರು, ಸಂಸದರ ಸಭೆಯಲ್ಲಿ ಯಡಿಯೂರಪ್ಪ ಅವರು ಈ ವಿಷಯ ತಿಳಿಸಿದರು.
ಭೀಕರ ಪ್ರವಾಹದಿಂದ ದೊಡ್ಡಮಟ್ಟದಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವಾಗಿದೆ. ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅವರಿಗೆ ನೆರವು ನೀಡಲು ಸರ್ಕಾರದ ಜೊತೆಗೆ ಕೈಗಾರಿಕೋದ್ಯಮಿಗಳು ಕೈಜೋಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರು ಮತ್ತು ಸಂಸದರು ತಮಗೆ ಆಪ್ತವಾಗಿರುವ ಉದ್ಯಮಿಗಳ ನೆರವನ್ನು ಪಡೆಯಲು ಪ್ರಯತ್ನ ಮಾಡಬೇಕೆಂದು ಹೇಳಿದರು.
ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷದ ಶಾಸಕರು, ಸಂಸದರ ಸಭೆ ಕರೆಯಲಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಪಕ್ಷಗಳ ಮುಖಂಡರು, ಶಾಸಕರು ಹಾಗೂ ಸಂಸದರ ಸಭೆ ಕರೆದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು ಎಂದರು.
ಇಂದಿನ ಸಭೆಯಲ್ಲಿ ಶಾಸಕರು, ಸಂಸದರ ಸಭೆಯಲ್ಲಿ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಹಾಗೂ ಉನ್ನತ ಅಧಿಕಾರಿಗಳು ಭಾಗವಹಿಸಿದ್ದಾರೆ ಎಂದರು.
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಚಿಂತನೆ ನಡೆದಿದೆ ಎಂದೂ ಯಡಿಯೂರಪ್ಪ ಅವರು ಸಭೆಯ ಗಮನಕ್ಕೆ ತಂದರು.
ಬಿಬಿಎಂಪಿಯಲ್ಲಿ ಕಸ ವಿಲೇವಾರಿ ಸೇರಿದಂತೆ ಕೆಲ ತುರ್ತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಇಂದಿನ ಸಭೆ ಕರೆಯಲಾಗಿದೆ ಅಷ್ಟೆ. ಬೆಂಗಳೂರು ಅಭಿವೃದ್ಧಿ ಬಗ್ಗೆ ಎಲ್ಲ ಪಕ್ಷಗಳ ಶಾಸಕರು, ಮುಖಂಡರ ಸಲಹೆಗಳನ್ನು ಪರಿಗಣಿಸುವುದಾಗಿ ಅವರು ಹೇಳಿದರು.
ಬಿಬಿಎಂಪಿಯ ಬಜೆಟ್ ಒಪ್ಪಿಗೆ, ಬಾಕಿ ಇರುವ ಕಾಮಗಾರಿ, ಸಮರ್ಪಕ ಕಸ ವಿಲೇವಾರಿ ಬಗ್ಗೆ ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಲ ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರಾದ ಪಿ.ಸಿ. ಮೋಹನ್, ರಾಜೀವ್ ಚಂದ್ರಶೇಖರ್, ಶಾಸಕರಾದ ಆರ್. ಅಶೋಕ್, ಅರವಿಂದ್ ಲಿಂಬಾವಳಿ, ವಿ. ಸೋಮಣ್ಣ, ಡಾ. ಅಶ್ವತ್ಥ್ ನಾರಾಯಣ, ಎಂ. ಕೃಷ್ಣಪ್ಪ, ಎಸ್.ಆರ್. ವಿಶ್ವನಾಥ್ ಸೇರಿದಂತೆ, ನಗರದ ಬಹುತೇಕ ಶಾಸಕರು ಪಾಲ್ಗೊಂಡಿದ್ದರು.

Leave a Comment