ಸಂತ್ರಸ್ತರ ನೆರವಿಗೆ ಬಾರದ ಸರ್ಕಾರದ ವಿರುದ್ಧ ಉಮಾಶ್ರೀ ವಾಗ್ದಾಳಿ

ಬಾಗಲಕೋಟೆ, ಸೆ 22-ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಅಕ್ಷರಶಃ ‌ಸಂಕಷ್ಟಕ್ಕೆ ಸಿಲುಕಿದ್ದರೂ ಸಹ ಬಿಜೆಪಿ ನೇತೃತ್ವದ  ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಪರಿಹಾರ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯವಾಗಿದೆ ಎಂದು ಮಾಜಿ‌ ಸಚಿವೆ ಉಮಾಶ್ರೀ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಸಂತ್ರಸ್ತರಿಗೆ ಪರಿಹಾರ ಕೊಡದಿರುವ ಹಿನ್ನೆಲೆಯಲ್ಲಿ
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಮಹಾತ್ಮಗಾಂಧಿ ಸರ್ಕಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂತ್ರಸ್ತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರ ಸಹಾಯಕ್ಕೆ ರಾಜ್ಯದ ಜನತೆ ಕೈ ಜೋಡಿಸಿ ಆಹಾರ, ಬಟ್ಟೆ, ಔಷಧೋಪಚಾರ, ಜಾನುವಾರುಗಳಿಗೆ ಮೇವು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಆದರೇ ಬಿಜೆಪಿ ನೇತೃತ್ವದ  ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆಶ್ವಾಸನೆ ಮೂಲಕ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ.ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂಧಿಸಿದಾಗ ಮಾತ್ರ ಉತ್ತಮ ಆಡಳಿತ ನಡೆಸಲು ಸಾಧ್ಯ ಇದನ್ನು ಬಿಜೆಪಿಗರು ಅರ್ಥೈಸಿಕೊಳ್ಳಬೇಕು ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳ ಜನರ ಜೀವನ ನಿಜಕ್ಕೂ ಸಂಕಷ್ಟದಲ್ಲಿ ಸಿಲುಕಿದ್ದು, ಬಿಜೆಪಿ ನೇತೃತ್ವದ ಸರ್ಕಾರಗಳು ಕಂಡರು ಕಾಣದಂತೆ. ಕೇಳಿದರು ಕೇಳದಂತೆ ಮರುಳರಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅಲ್ಲದೇ ಬಾಗಲಕೋಟ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಹಲವಾರು ನೆರೆ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆದಿದ್ದರು ಕಣ್ಣು ಮುಚ್ಚಿ ಕುಳಿತಿರುವುದು ಸರಿಯಲ್ಲ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗೆ ನಿಲ್ಲಬೇಕು ಎಂದರು.
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಂತ್ರಸ್ತರಿಗೆ ಪರಿಹಾರ ಕೊಡದ  ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸುವ ಮೂಲಕ ಟೈರಗಳಿಗೆ  ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನೆರೆ ಸಂತ್ರಸ್ತರು ಭಾಗವಹಿಸಿದ್ದರು.

Leave a Comment