ಸಂತ್ರಸ್ತರತ್ತ ದಿವ್ಯ ನಿರ್ಲಕ್ಷ್ಯ: ಹಿಡಿಶಾಪಕ್ಕೆ ತುತ್ತಾಗುತ್ತಿರುವ ಪ್ರತಿನಿಧಿ, ಅಧಿಕಾರಿಗಳು

ಹುಬ್ಬಳ್ಳಿ, ಆ 14: ಪ್ರವಾಹಕ್ಕೊಳಗಾದ ಸಂತ್ರಸ್ತರ ನೆರವಿಗೆ ಧಾವಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದು, ಇದಕ್ಕೆ ತೀವೃ ಆಕ್ರೋಶ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ ಶಾಲೆಯೊಂದರಲ್ಲಿ ನೆರೆ ಸಂತ್ರಸ್ತರಿಗೆ ಸ್ಥಳೀಯ ಅಧಿಕಾರಿಗಳು ಶಾಲೆಗಳನ್ನು ಖಾಲಿ ಮಾಡಿರಿ ಎಂದು ಗದರಿಸಿದ ಘಟನೆ ನಡೆದಿದೆ.
ನಾಳೆ ಸ್ವಾತಂತ್ರ್ಯೋತ್ಸವದ ನಿಮಿತ್ತ ಶಾಲೆಯಲ್ಲಿ ಧ್ವಜಾರೋಹಣ ಮಾಡುವುದಿದೆ. ಆದ್ದರಿಂದ ನೀವೆಲ್ಲ ಇಲ್ಲಿಂದ ಎದ್ದು ಹೋಗಿರಿ ಎಂದು ಸರ್ಕಾರಿ ಶಾಲೆಯೊಂದರಲ್ಲಿ ಸಂತ್ರಸ್ತರಿಗೆ ಅಧಿಕಾರಿಗಳು ಧಮಕಿ ಹಾಕಿದ್ದಾರೆ.
ಒಂದುವೇಳೆ ಇಲ್ಲಿಂದ ಕದಲದಿದ್ದರೆ ಲಾಠಿ ರುಚಿ ತೋರಿಸಲಾಗುವುದು ಎಂದು ಸಹ ಹೆದರಿಸಿದ್ದು, ಸಂತ್ರಸ್ತರು ತೊಳಲಾಡಿದ ಅಮಾನವೀಯ ಘಟನೆ ನಡೆದಿದೆ.
ಸರ್ಕಾರಿ ಶಾಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಸಂತ್ರಸ್ತರು ತಂಗಿದ್ದು, ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಇವರೊಂದಿಗೆ ಈ ರೀತಿಯಾಗಿ ವರ್ತಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮನೆಮಠ ಕಳೆದುಕೊಂಡವರು ನಾವೆಲ್ಲಿ ಹೋಗಬೇಕು ಎಂದು ತೊಳಲಾಟದಲ್ಲಿದ್ದವರಿಗೆ ಸ್ಥಳಿಯ ಶಾಸಕರು ಸಾಂತ್ವನ ಹೇಳಿ ಇಲ್ಲೇ ಶಾಲೆಯಲ್ಲಿಯೇ ಇರಿ ಎಂದು ಹೇಳಿದ್ದು, ಸದ್ಯ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪೂರ ಗ್ರಾಮದಲ್ಲಿ ಪ್ರವಾಹ ಕಡಿಮೆಯಾಗಿದ್ದರೂ, ಆ ಗ್ರಾಮದಲ್ಲೀಗ ಭಯದ ವಾತಾವರಣ ನಿರ್ಮಾಣವಾಗಿದೆ. ಗ್ರಾಮಕ್ಕೆ ಹಾವುಗಳ ಕಾಟ ಹೆಚ್ಚಾಗಿದ್ದು, ಜನ ಭಯಭೀತರಾಗಿ ಗ್ರಾಮಕ್ಕೆ ತೆರಳುತ್ತಿಲ್ಲ. ಕೆಲ ಮನೆಗಳು ನೆಲಕ್ಕಚ್ಚಿದ್ದು, ನಿರಾಶ್ರಿತರು ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಡಿ ಎಂದು ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಇದಕ್ಕೆ ಸ್ಪಂದಿಸದೆ ಜಾಣಕುರುಡರಾಗಿದ್ದಾರೆ.
ಇತ್ತ ಬಾಗಲಕೋಟೆಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾದ ಪರಿಣಾಮ ಜನ ಭಯಭೀತರಾಗಿದ್ದಾರೆ. ರೋಗದ ಮುನ್ಸೂಚನಾ ಕ್ರಮಗಳನ್ನು ಕೈಗೊಳ್ಳದ ಜಿಲ್ಲಾಡಳಿತದ ವಿರುದ್ಧ ಸಂತ್ರಸ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ಹುಬ್ಬಳ್ಳಿ-ನರಗುಂದ-ವಿಜಯಪುರ ಮೂಲಕ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ ನರಗುಂದದ ಕೊಣ್ಣುರು ಗ್ರಾಮದಲ್ಲಿ ಸುಮಾರು 2 ಕಿ.ಮೀ ಹಾಳಾಗಿದ್ದು, ಇದರ ದುರಸ್ತಿ ಕಾರ್ಯ ಇನ್ನೂ ಕೈಗೊಳ್ಳದ ಕಾರಣ ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಪ್ರವಾಹದ ನಂತರ ಮತ್ತೆ ಬದುಕು ಕಟ್ಟಿಕೊಳ್ಳಬೇಕೆಂದು ಸಂತ್ರಸ್ತರು ಅಧಿಕಾರಿಗಳ ಹಾಗೂ ಪ್ರಜಾಪ್ರತಿನಿಧಿಗಳಲ್ಲಿ ಅಂಗಲಾಚುತ್ತಿದ್ದು, ಇದಕ್ಕೆ ಕೆಲಕಡೆಗಳಲ್ಲಿ ಸ್ಪಂದನೆ ದೊರೆತಿದ್ದರೂ ಇನ್ನೂ ಕೆಲಕಡೆಗಳಲ್ಲಿ ಸೂಕ್ತ ಸ್ಪಂದನೆಗಳು ದೊರೆಯುತ್ತಿಲ್ಲ. ಇದಕ್ಕೆ ಜನರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಹಾರಾಷ್ಟ್ರ, ಕೇರಳ ಹಾಗೂ ಓಡಿಶಾ ರಾಜ್ಯಗಳಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದ್ದು, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.
ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ವಾಡಿಕೆಯ ಮಳೆಯಾಗುವುದು ಬಿಟ್ಟರೆ ಈಗ ರಾಜ್ಯದ ಪ್ರವಾಹ ಪರಿಸ್ಥಿತಿ ತಗ್ಗಿದೆ.
ಆದರೆ ಉತ್ತರ ಕರ್ನಾಟಕದಲ್ಲಿ ಕೃಷ್ಣೆಯ ಪ್ರವಾಹ ಮಟ್ಟ ಇನ್ನೂ ಕಡಿಮೆಯಾಗಬೇಕಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಇನ್ನೂ ಕಡಿಮೆಯಾಗದೆ ಇಂದು ಸಹ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾದಿಕಾರಿ ಆದೇಶ ಹೊರಡಿಸಿದ್ದಾರೆ.
ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಪ್ರವಾಹ ಅಲ್ಪ ಕಡಿಮೆಯಾದರೂ ಇನ್ನೂ ಕೆಲ ಕಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿಲ್ಲ.

Leave a Comment