ಸಂಗೊಳ್ಳಿ ರಾಯಣ್ಣನನ್ನು ನೆನೆಯುವುದು ಭಾರತೀಯರ ಕರ್ತವ್ಯ

ಮಂಡ್ಯ : ಜ.27- ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಬ್ರಿಟಿಷರ ವಿರುದ್ಧ ಮೆಟ್ಟಿ ನಿಂತ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿದ್ದ, ಆತ ತನ್ನ ಕೊನೇ ಉಸಿರು ಇರುವವರೆವಿಗೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರ ಎಂದು ಜಿ.ಪಂ. ಅಧ್ಯಕ್ಷೆ ನಾಗರತ್ನ ಸ್ವಾಮಿ ಬಣ್ಣಿಸಿದರು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಂಸ್ಕೃತಿಕ ಸಂಘಟನೆ ವತಿಯಿಂದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಸ್ಮರಣಾರ್ಥ ರಾಜ್ಯ ಮಟ್ಟದ ದೇಶಭಕ್ತಿಗೀತೆಗಳ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣನ ಹೆಸರು ಕೇಳಿದರೆ ಸಾಕು ದೇಶಭಕ್ತಿಯ ರಕ್ತ ಪುಟಿದೇಳುತ್ತದೆ. ಅಂತಹ ಕೆಚ್ಚೆದೆಯ ಹೋರಾಟಗಾರನನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವೂ ಆಗಿದೆ ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥವಾಗಿ ದೇಶಭಕ್ತಿಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ದೇಶಭಕ್ತಿಗೀತೆ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಅದರೊಂದಿಗೆ ಯುವಜನರಲ್ಲಿ ರಾಷ್ಟ್ರಪ್ರೇಮ ಬೆಳೆಸಬೇಕು ಎಂದು ಕರೆ ನೀಡಿದರು.
ಮುಡಾ ಅಧ್ಯಕ್ಷ ಕೆ. ಶ್ರೀನಿವಾಸ್ ಮಾತನಾಡಿ, ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ತಿರುಗಿಬಿದ್ದ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರು. ಬ್ರಿಟಿಷರ ಜೊತೆ ಕೈಜೋಡಿಸಿದ್ದ ಭೂಮಾಲಿಕರ ವಿರುದ್ಧ ವೂ ಆತ ತಿರುಗಿನಿಂತ. ಗೆರಿಲ್ಲಾ ಯುದ್ಧದ ಹರಿಕಾರ ಎಂದೇ ಖ್ಯಾತನಾಗಿದ್ದ ರಾಯಣ್ಣ, ಗೆರಿಲ್ಲಾ ತಂತ್ರಗಾರಿಕೆ ಬಳಸಿ ಭೂಮಾಲಿಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡು ಸುಟ್ಟುಹಾಕಿದ. ಅಲ್ಲದೆ, ಅವರಿಂದ ಕಿತ್ತುಕೊಂಡ ರೊಕ್ಕವನ್ನು ಬಡಬಗ್ಗರಿಗೆ ಹಂಚಿದ ಎಂದು ವಿವರಿಸಿದರು.
ವೀರ ರಾಣಿ ಕಿತ್ತೂರು ಚೆನ್ನಮ್ಮನನ್ನು ಬಗ್ಗುಬಡಿಯಬೇಕೆಂದರೆ ಆಕೆಯ ಬಲಗೈ ಬಂಟನಾಗಿದ್ದ ರಾಯಣ್ಣನನ್ನು ಮೆಟ್ಟಿನಿಲ್ಲಬೇಕೆಂದು ನಿರ್ಧರಿಸಿದ ಬ್ರಿಟಿಷ್ ಅಧಿಕಾರಿಗಳು ಸಂಚುಹೂಡಿ, ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇದಕ್ಕಾಗಿ ಅವರು ಬಳಸಿಕೊಂಡಿದ್ದ ರಾಯಣ್ಣನ ಸ್ವಂತ ಮಾವ ಲಕ್ಷ್ಮಣನನ್ನು ತಮ್ಮ ಕುತಂತ್ರದ ದಾಳವನ್ನಾಗಿ ಮಾಡಿಕೊಂಡರು ಎಂದು ಹೇಳಿದರು.
ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಸೈನಿಕರು ಆಕ್ರಮಣ ಮಾಡಿದಾಗ ರಾಯಣ್ಣನ ಖಡ್ಗ ಮಾವ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ನೀಡೆಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ವಿಧಿಯಿಲ್ಲದೆ ರಾಯಣ್ಣ ಬ್ರಿಟಿಷರ ಕೈವಶವಾಗಬೇಕಾಯಿತು. ಬಳಿಕ ಬ್ರಿಟೀಷರು ರಾಯಣ್ಣನನ್ನು ಬೆಳಗಾವಿ ಜಿಲ್ಲೆಯ ನಂದಗಡ ಎಂಬ ಗ್ರಾಮದಲ್ಲಿ ಗಲ್ಲಿಗೇರಿಸಿದರು ಎಂದು ವಿವರಿಸಿದರು.
ಗಲ್ಲಿಗೇರಿಸುವ ಮುನ್ನ ಬ್ರಿಟಿಷ್ ಅಧಿಕಾರಿಗಳು ನಿನ್ನ ಕಡೆಯ ಆಸೆ ಏನೆಂದು ಕೇಳಿದಾಗ, ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು ಎಂದು ಸಿಂಹದಂತೆ ಘರ್ಜಿಸಿದ್ದ ರಾಯಣ್ಣ. ಮೋಸ ಮಾಡಿದ ಮಾವ ಮತ್ತು ಗುಳ್ಳೆನರಿಯಂತೆ ಇದ್ದ ಬ್ರಿಟಿಷರನ್ನು ರಾಯಣ್ಣ ಕುನ್ನಿಗಳೆಂದು ಜರಿದಿದ್ದ ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯರಾದ ಪುಷ್ಪಲತಾ, ಸಾವಿತ್ರಮ್ಮ, ಕೋಮಲ, ಲಯನ್ಸ್ ರಾಜ್ಯಪಾಲರ ಕಾರ್ಯಕ್ರಮ ಸಂಯೋಜಕ ಬಿ.ಎಂ. ಅಪ್ಪಾಜಪ್ಪ, ಜಿ.ಪಂ. ಸದಸ್ಯ ಮರಿಹೆಗಡೆ, ತಾ.ಪಂ. ಸದಸ್ಯ ಬೀರಪ್ಪ, ಜಿ.ಪಂ. ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಪುಟ್ಟೀಕೊಪ್ಪಲು ಮರೀಗೌಡ, ಪ್ರಧಾನ ಕಾರ್ಯದರ್ಶಿ ಗೊರವಾಲೆ ಚಂದ್ರಶೇಖರ್, ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರಾಜೇಶ್ವರಿ ಇತರರಿದ್ದರು.

Leave a Comment